ಲಾಕ್ ಡೌನ್ ಸಡಿಲ


ಈಗ ಹೊರಗಡೆ ಓಡಾಡುವುದು ಸುಲಭವಲ್ಲ
ಗೂಗಲ್ ಅಕ್ಕನಿಗೂ ರಸ್ತೆ ತಿಳಿಯುವುದಿಲ್ಲ
ಕೆಲವು ದಾರಿಗಳು ಮುಚ್ಚಿವೆ
ಕೆಲವು ಅರ್ಧ ಮಾತ್ರ ಕಣ್ಬಿಚ್ಚಿವೆ
ಜನ ಹೇಗೆ ಗಾಡಿ ಓಡಿಸುತ್ತಿದ್ದಾರೋ ಕಾಣೆ
ಹೇಗೋ ಒಪ್ಪಿಕೊಂಡಿದ್ದಾರೆ ಬದಲಾವಣೆ

ನಮ್ಮ ಜನರಿಗಿಲ್ಲ ಮಾಸ್ಕ್ ತೊಟ್ಟು ಅಭ್ಯಾಸ
ಕೆಲವರು ಹಾಗೇ ಹೊರಬಂದಿದ್ದಾರೆ ರಾಜಾರೋಷ
ಕೆಲವರ ಧ್ವಜ ಜಾರಿದೆ ಅರ್ಧದಷ್ಟು ಕೆಳಗೆ
ಕೆಲವರಿಗೆ ಮಾತ್ರ ಬಾಯ್ಮುಚ್ಚುವಷ್ಟು ಸಲುಗೆ
ಜನ ಹೇಗೋ ಉಸಿರಾಡುತ್ತಿದ್ದಾರೆ ಈಗಲೂ
ಮೂಗು ಬಾಯಿ ಲಾಕ್ ಡೌನ್ ಮಾಡಿದರೂ ಬಾಗಿಲು

ಇರಾಕ್, ಸಿರಿಯಾಗಳಲ್ಲಿ ಬಾಂಬ್ ದಾಳಿಗೆ ಹೆದರಿ ಜನ
ಹೇಗೆ ಬದುಕುವರೋ ದಿನದಿನ!
ಧರ್ಮಾಂಧನ ಎದೆ ಕರೋನಾಗಿಂತ ಕಠಿಣ
ಸಿಡಿಯುವುದು ಯಾವುದೋ ಅನಿರೀಕ್ಷಿತ ಕ್ಷಣ
ಯಾವ ಮುಖವಾಡವೂ ನೀಡಲಾರದು ರಕ್ಷೆ
ಎಷ್ಟು ಕೈ ತೊಳೆದರೇನು ಯಾರ ಪಾಪಕ್ಕೆ

ಬಾಂಬ್ ದಾಳಿಯ ನಂತರ ಹೊರಗೆ ಬಂದಂತೆ ಜನ
ಅಳುಕುತ್ತಿದ್ದರೂ ತಾಳಲಾಗದೇ ಬಂಧನ
ಹೊರಗೆ ಇಣುಕುತ್ತಿದ್ದಾರೆ ಮೆಲ್ಲಮೆಲ್ಲನೆ ಮಂದಿ
ಬಹುಮೆಲ್ಲನೆ ಕುಂಟುತ್ತಿದೆ ಬದುಕಿನ ಜಟಕಾ ಬಂಡಿ.
ಮುಖವಾಡವಿದ್ದರೂ ಗುರುತಿಸಿ ಮುಗುಳ್ನಗೆ
ಹೆಚ್ಚು ಮಾತಿಲ್ಲ ಹೊರಗೆ, ಎಲ್ಲ ಒಳಗೊಳಗೇ.

"ತೆರೆದ ಬಾಗಿಲು ನಾನು, ಸರ್ವಋತು ಬಂದರು."
ವೈಶಾಖ ಕಳೆದರೂ ವರ್ಷಋತು ಬಂದರೂ.
ಬರಲಿ ಏನೇ ಪಾಲಿಗೆ ಅದುವೆ ಪಂಚಾಮೃತ
ಎನ್ನುತ್ತ ಜನಗಣವು ಬಿಡದೆ ಜೀವನವೃತ
ಮುನ್ನಡೆಯುತ್ತಿದೆ ಹೇಗೋ ನಮ್ಮ ಮಹಾನ್ ಭಾರತ
ಗತಿ ನಿಧಾನವಾದರೇನು ಯಾರಿಗಿಲ್ಲಿ ತ್ವರಿತ!
ಸಿ.ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)