ನಿಸಾರ್ ಅಹಮದ್ ಅವರ ನೆನಪು


ನಿಸಾರ್ ಅಹ್ಮದ್ ಅವರೊಂದಿಗೆ ಒಮ್ಮೆ ಪ್ರಯಾಣಿಸುವ ಮತ್ತು ಅವರೊಂದಿಗೆ ಕಾವ್ಯವಾಚನದಲ್ಲಿ ಪಾಲ್ಗೊಳ್ಳುವ ಅವಕಾಶ ನನಗೆ ಬಂದಿತ್ತು. ಅದು ಆದದ್ದು ಹೀಗೆ.


ಶ್ರೀ ಎಂ. ಎಸ್. ಭಾರದ್ವಾಜ್ ಅವರು ನನ್ನ ತಂದೆಯವರ ಹತ್ತಿರದ ಮಿತ್ರರು. ಅವರಿಗೆ ವಾರ್ತಾ ಇಲಾಖೆಯಲ್ಲಿ ಉನ್ನತ ಹುದ್ದೆ. ನಿರಂಜನ, ಭಾರದ್ವಾಜ್, ನಮ್ಮ ತಂದೆ ಇವರು ಮೂವರೂ ಹತ್ತಿರದ ಮಿತ್ರರು. ನನ್ನ ತಂದೆ ದೆಹಲಿಗೆ ಹೋದಾಗ ಭಾರದ್ವಾಜ್ ಅವರೂ ದೆಹಲಿಯಲ್ಲಿದ್ದರು. ಅವರ ಮನೆಗೆ ನಾವು ಹೋದ ನೆನಪು ಹಸಿರಾಗಿದೆ. ಅವರ ಹೆಂಡತಿ ಶ್ರೀಮತಿ ವೃಂದಾ ಭಾರದ್ವಾಜ್ ಸಣ್ಣ ಕತೆಗಳನ್ನು ಬರೆಯುತ್ತಿದ್ದರು. ಮಕ್ಕಳು ಮಾಯಾ ಮತ್ತು ಮಮತಾ. ನಮ್ಮ ತಂದೆ ದೆಹಲಿಯಲ್ಲಿ 5 ವರ್ಷ ಕೆಲಸ ಮಾಡಿ ಬೆಂಗಳೂರಿಗೆ ಮರಳಿದರು. ಮುಂದೆ ಭಾರದ್ವಾಜ್ ಕೂಡಾ ಬೆಂಗಳೂರಿಗೆ ಮರಳಿ ಬಂದರು. ಅವರ ಮನೆ ನಮ್ಮ ಮನೆಯ ಪಕ್ಕದ ಬೀದಿಯಲ್ಲೇ ಇತ್ತು. ಅವರು ಈಗ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ನನ್ನನ್ನು ಅವರು ತಮ್ಮ ಮಗನಷ್ಟೇ ಪ್ರೀತಿಸುತ್ತಿದ್ದರು ಎಂದರೆ ಅತಿಶಯೋಕ್ತಿಯಲ್ಲ. ನಾನೂ ಒಂದಿಷ್ಟು ಬರೆಯುತ್ತೇನೆ ಎಂದು ನನ್ನ ತಂದೆ ಅವರಿಗೆ ಹೇಳಿದ್ದೇ ಅವರಿಗೆ ಸಾಕಾಯಿತು. ಒಂದು ದಿನ ಬಂದು "ಚಿತ್ರದುರ್ಗದಲ್ಲಿ ಒಂದು ಕವಿಗೋಷ್ಠಿ ಇದೆ. ರವಿಯನ್ನೂ ಕಳಿಸಿಕೊಡಿ, ನನ್ನ ಜೊತೆ ಬರುತ್ತಾನೆ, ಅವನೂ ಒಂದು ಕವಿತೆ ಓದಲಿ" ಎಂದರು. ಹಿಂದೆಂದೂ ಕವಿಗೋಷ್ಠಿಯಲ್ಲಿ ನಾನು ಪಾಲ್ಗೊಂಡಿರಲಿಲ್ಲ. ಹೀಗಾಗಿ ನನಗೆ ಇದು ಹೊಸ ಅನುಭವ. ನಾನು ಒಂದು ಕವಿತೆ ಸಿದ್ಧಪಡಿಸಿಕೊಂಡು ರೆಡಿಯಾದೆ.


ಭಾರದ್ವಾಜ್ ಅವರ ಜೀಪಿನಲ್ಲಿ ನಾಲ್ಜು ಜನ ಪ್ರಯಾಣ ಮಾಡಲು ಹೊರಟೆವು. ಕವಿ ಕೆ. ಎಸ್. ನಿಸಾರ್ ಅಹಮದ್ ಮತ್ತು ಆಕಾಶವಾಣಿಯಲ್ಲಿ ಉದ್ಯೋಗದಲ್ಲಿದ್ದ ಕೆ. ಸತ್ಯನಾರಾಯಣ ಅವರನ್ನೂ ಅವರ ಮನೆಗಳಿಂದ ಪಿಕಪ್ ಮಾಡಿಕೊಂಡು ಹೊರಟೆವು. ನಿಸಾರ್ ಅವರ ಮನೆಯೂ ನಮ್ಮ ಮನೆಯ ಹತ್ತಿರದಲ್ಲೇ ಇತ್ತು. ಕೆ.ಎಸ್. ನರಸಿಂಹಸ್ವಾಮಿ ಅವರ ಮನೆಯೂ ಅಲ್ಲೇ ಹತ್ತಿರದಲ್ಲಿತ್ತು. ಇಬ್ಬರೂ ಕವಿಗಳ ಇನಿಷಿಯಲ್ಸ್ ಒಂದೇ. ಇದರಿಂದ ಹುಟ್ಟಿದ ಗೊಂದಲವನ್ನು ಕೆ.ಎಸ್.ನ. ಒಂದು ಕವಿತೆಯಲ್ಲಿ ಹಾಸ್ಯವಾಗಿ ಬರೆದಿದ್ದಾರೆ.


ನಿಸಾರ್ ಅವರಿಗೆ ಈಗಾಗಲೇ ದೊಡ್ಡ ಹೆಸರಿತ್ತು. "ಜೋಗದ ಸಿರಿ ಬೆಳಕಿನಲ್ಲಿ" ಕವಿತೆಯನ್ನು ಆಗ ಅನೇಕ ಕಾರ್ಯಕ್ರಮಗಳಲ್ಲಿ ಹಾಡುತ್ತಿದ್ದರು. "ಕುರಿಗಳು ಸಾರ್ ಕುರಿಗಳು" ಕವಿತೆ ಕೂಡಾ ಹಾಡಾಗಿ ಜನಪ್ರಿಯತೆ ಪಡೆಸುಕೊಂಡಿತ್ತು. ವಯಸ್ಸಿನಲ್ಲಿ ಕಿರಿಯನಾದ ನಾನು ಅವರೊಂದಿಗೆ ಮಾತಾಡಲು ಸಂಕೋಚ ಪಡುತ್ತಿದ್ದೆ. ಅವರು ನನ್ನನ್ನು ಕಿಚಾಯಿಸುತ್ತಿದ್ದರು. ಅವರು ಜಿಯಾಲಜಿ ಉಪಾಧ್ಯಾಯರು. ದಾರಿಯಲ್ಲಿ ಕಂಡ ವಿವಿಧ ಬಗೆಯ ಮಣ್ಣುಗಳ ಹೆಸರು ಹೇಳುತ್ತಿದ್ದರು. ಉದ್ದಕ್ಕೂ ಏನಾದರೂ ಮಾತಾಡುತ್ತಾ ನಮ್ಮ ಮನರಂಜಿಸಿದರು. ಕೆ. ಸತ್ಯನಾರಾಯಣ ಅವರೂ ತಮ್ಮ ಆಕಾಶವಾಣಿ ಅನುಭವಗಳನ್ನು ಹೇಳುತ್ತಿದ್ದರು. ಶ್ರೀ ರಾವ್ ಬಹದ್ದೂರ್ ಅವರು ಒಮ್ಮೆ ಲೈವ್ ಕಾರ್ಯಕ್ರಮದ ನಡುವೆ ಓದಲು ತಂದ ಹಾಳೆಗಳು ಕಲಸಿಹೋದಾಗ "ಎಲಾ ಇದ..ನ!" ಎಂದು ಬೈಗುಳ ಪದ ಬಳಸಿದ್ದನ್ನು ಹೇಳಿದಾಗ ನಿಸಾರ್ ಅವರು ಜೋರಾಗಿ ನಗುತ್ತಿದ್ದರು. ಭಾರದ್ವಾಜ್ ಕೂಡಾ ತಮ್ಮ ಅನುಭವಗಳನ್ನು ಹೇಳುತ್ತಿದ್ದರು. ನಾನು ಇನ್ನೂ ಪಿಯುಸಿ ವಿದ್ಯಾರ್ಥಿಯಾದ್ದರಿಂದ ನನಗೆ ಹೇಳಿಕೊಳ್ಳುವ ಅಂಥ ಯಾವುದೂ ಅನುಭವ ಇರಲಿಲ್ಲ! ನಾನು ಎಲ್ಲವನ್ನೂ ಕೇಳಿಸಿಕೊಳ್ಳುವ ಶ್ರೋತೃವಷ್ಟೇ!


ಚಿತ್ರದುರ್ಗದ ವೀಕ್ಷಣಾಧಿಕಾರಿಗಳ ಬಂಗಲೆಯಲ್ಲಿ ನಮಗೆ ಎರಡು ಕೊಠಡಿಗಳನ್ನು ಕೊಟ್ಟಿದ್ದರು. ನಾನು ಮತ್ತು ಶ್ರೀ ಭಾರದ್ವಾಜ್ ಒಂದು ಕೊಠಡಿಯಲ್ಲಿ ತಂಗಿದೆವು. ಬಂಗಲೆಯ ಹೊರಗೆ ಮರಗಿಡಗಳನ್ನು ಸೊಂಪಾಗಿ ಬೆಳೆಸಿದ್ದರು. ಇಂಥದೊಂದು ಬಂಗಲೆಯಲ್ಲಿ ಒಂದು ರಾತ್ರಿ ಕಳೆಯುವ ಅವಕಾಶ ನನಗೆ ಹೊಸದು. ಭಾರದ್ವಾಜ್ ಅವರು ಉನ್ನತ ಅಧಿಕಾರಿಗಳಾದ್ದರಿಂದ ಉಪಚಾರವೂ ನಡೆಯಿತು. "ನನಗೆ ಬೆಳಗ್ಗೆ ಟೀ ಬೇಕು. ಬೇಗ ಕಳಿಸಿ!" ಎಂದು ಭಾರದ್ವಾಜ್ ಹುಕುಂ ಮಾಡಿದ್ದರು. ನಾನು ಬೆಳಗ್ಗೆ ಏಳುವಷ್ಟರಲ್ಲಿ ಅವರು ಆಗಲೇ ಎದ್ದು ತಮ್ಮ ಟೀ ಕುಡಿದು ನ್ಯೂಸ್ ಪೇಪರ್ ಓದುತ್ತಿದ್ದರು. ನನಗೆ ಟೀ ಕುಡಿಯಲು ಹೇಳಿದರು. "ಫ್ಲಾಸ್ಕ್ ಟೀ ಅಷ್ಟು ಚೆನ್ನಾಗಿಲ್ಲ, ಅವರು ಇನ್ನೂ ಫ್ರೆಷ್ ಟೀ ತಂದಿಲ್ಲ" ಎಂದು ಅವರು ಬೇಜಾರು ಮಾಡಿಕೊಂಡರು. ಅಂದು ಬೆಳಗ್ಗೆ ತಮ್ಮ ಜೀಪಿನಲ್ಲಿ ನನ್ನನ್ನು, ನಿಸಾರ್ ಮತ್ತು ಸತ್ಯನಾರಾಯಣ ಅವರನ್ನು ಚಿತ್ರದುರ್ಗ ನೋಡಲು ಕಳಿಸಿಕೊಟ್ಟರು.


"ದುರ್ಗದ ಕೋಟೆಯನ್ನು ನಾನು ನೋಡಿದ್ದೇನೆ, ಅದನ್ನು ಮತ್ತೆ ಏನು ನೋಡುವುದು! ನನಗೆ ಚಂದ್ರವಳ್ಳಿಯನ್ನು ನೋಡಬೇಕು" ಎಂದು ನಿಸಾರ್ ಬೇಡಿಕೆ ಮುಂದಿಟ್ಟರು. ಚಿತ್ರದುರ್ಗದವರೇ ಆದ ಮತ್ತು ಚಂದ್ರವಳ್ಳಿಯ ಬಗ್ಗೆ ಅಪಾರ ಪಾಂಡಿತ್ಯ ಹೊಂದಿದ್ದ ಒಬ್ಬರು ನಮ್ಮ ಜೊತೆಯಾದರು. ಅವರ ಹೆಸರು ಮರೆತಿದೆ. ಅವರು ನಮಗೆ ಚಂದ್ರವಳ್ಳಿಯ ಅಪರೂಪದ ಐತಿಹಾಸಿಕ ಸ್ಥಳಗಳಿಗೆ ಕರೆದುಕೊಂಡು ಹೋದರು. ಒಂದು ಕಡೆ ತೆವಳಿಕೊಂಡು ಹೋಗಿ ಒಂದು ಗುಪ್ತ ಸಭಾಭವನವನ್ನು ಪ್ರವೇಶಿಸಿದ ಅನುಭವ ಇನ್ನೂ ನೆನಪಿನಲ್ಲಿ ಹಸಿರಾಗಿದೆ. ಇದೆಲ್ಲವನ್ನೂ ನಿಸಾರ್ ಬಹಳ ಕುತೂಹಲದಿಂದ ಕೇಳಿಸಿಕೊಂಡರು. ಅವರಿಗೆ ಶಿಲ್ಪಕಲೆಯ ಬಗ್ಗೆ ಸಾಕಷ್ಟು ತಿಳಿವಳಿಕೆ ಇತ್ತೆಂದು ನನಗೆ ಅನುಭವವಾಯಿತು. 


ಸಂಜೆ ಕವಿಗೋಷ್ಠಿಗೆ ನಿಸಾರ್ ಅಧ್ಯಕ್ಷರು. ಸ್ಥಳೀಯ ಕವಿಗಳೂ ಸಾಕಷ್ಟು ಜನ ಬಂದಿದ್ದರು. ಇಡೀ ಸಭಾಭವನ ತುಂಬಿತ್ತು. ಪ್ರೇಕ್ಷಕರು ಉತ್ತಮ ಅಭಿರುಚಿ ಹೊಂದಿದ್ದರು ಎಂಬುದು ವೇದ್ಯವಾಗಿತ್ತು. ನಿಸಾರ್ ಅವರು ಮಾತಾಡಿ ಕವಿಗಳ ಕವಿತೆಗಳ ಬಗ್ಗೆ ತಮ್ಮ ಅನ್ನಿಸಿಕೆಗಳನ್ನು ಹೇಳಿದರು. ದುರ್ಗದವರೇ ಆದ ಅ.ರಾ.ಸೇ. ಕೂಡಾ ಬಂದಿದ್ದರು ಎಂದು ನೆನಪು. ಅವರೊಂದಿಗೆ ಮುಂದೆ ಊಟದ ಸಮಯದಲ್ಲಿ ನಿಸಾರ್ ಅವರು ಮಾತಾಡಿದ್ದು ನೆನಪಿದೆ. ನಿಸಾರ್ ತಮ್ಮ "ಕುರಿಗಳು ಸಾರ್", "ಅಮ್ಮ ಆಚಾರ, ನಾನು" ಕವಿತೆಗಳನ್ನು ಓದಿದರು. ಸಭಿಕರು ಉತ್ಸಾಹದಿಂದ ಪಾಲ್ಗೊಂಡರು. ಕಾರ್ಯಕ್ರಮವನ್ನು ಶ್ರೀ ಕೆ. ಸತ್ಯನಾರಾಯಣ ರಿಕಾರ್ಡ್ ಮಾಡಿಕೊಂಡರು. ಮುಂದೆ ಅದು ಆಕಾಶವಾಣಿಯಲ್ಲಿ ಪ್ರಸಾರವೂ ಆಯಿತು.


ಅನಂತರ ನಿಸಾರ್ ಅವರನ್ನು ಖುದ್ದಾಗಿ ಭೇಟಿಯಾಗುವ ಸಂದರ್ಭ ಸಿಕ್ಕಲಿಲ್ಲ. ಅವರ ಹಲವು ಕವಿತೆಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಇಂಟರ್ನೆಟ್ ಮೇಲೆ ಪ್ರಕಟಿಸಿದಾಗ ವಿವಿಧ ಭಾಷೆಯ ಓಡುಗರಿಂದ ಬಹಳ ಒಳ್ಳೆಯ ಪ್ರತಿಕ್ರಿಯೆ ಬಂತು. ಅದರಲ್ಲೂ "ನಿಮ್ಮೊಡನಿದ್ದೂ ನಿಮ್ಮಂತಾಗದೆ" ಮತ್ತು "ರಂಗೋಲಿ ಮತ್ತು ಮಗ" ಕವಿತೆಗಳ ಅನುವಾದಗಳನ್ನು ನೆಟ್ಟಿಗರು ಬಹಳ ಆತ್ಮೀಯತೆಯಿಂದ ಬರಮಾಡಿಕೊಂಡರು.


ನಿಸಾರ್ ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಅವರು ತಮ್ಮ ಕವಿತೆಗಳ ಮೂಲಕ ಸದಾ ನಮ್ಮ ನಡುವೆ ಇರುತ್ತಾರೆ.


ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)