ಎಂಜಲು

Green Fruits

ಎಂಜಲಿಗೇಕೆ ಹೆದರುವಿರಿ, ಎಂಜಲು ಬದುಕಿನಲ್ಲಿ?

ನೀವು ಕುಡಿಯುವ ಹೊಳೆಯ ನೀರನ್ನು
ಅಲ್ಲೆಲ್ಲೋ ಎಂಜಲು ಮಾಡಿದೆ
ಒಂದು ಸಾರಂಗ, ಒಂದು ಕಾಡೆಮ್ಮೆ, ಒಂದು ಆನೆ.
ಪಾಲಿಥೀನ್ ಬ್ಯಾಗಲ್ಲಿ ಬಂತೆಂದು
ಹಾಲೇನೂ ಪರಿಶುದ್ಧವಲ್ಲ
ಅಮ್ಮನ ಕೆಚ್ಚಲಿಗೆ ಬಾಯಿಟ್ಟು ಎಂಜಲು ಮಾಡಿದೆ ಕರು.
ನೀಟಾಗಿ ಪ್ಯಾಕೇಜ್ ಮಾಡಿದ ಬೇಳೆ ಕಾಳನ್ನು
ಹೊಲದಲ್ಲಿ ರುಚಿ ನೋಡಿ ಎಂಜಲು ಮಾಡಿದೆ ಒಂದು ಹಕ್ಕಿ.

ನೀವು ಆನಂದದಿಂದ ಮೆಲ್ಲುವ ಪಾನಿಪೂರಿಯ
ಹಿಟ್ಟಿನ ರುಚಿ ನೋಡಿದೆ ಜಿರಳೆ
ಎಂಜಲು ಮಾಡಿದೆ ಇಲಿ.

ಹೆದರಿಕೆ ಏಕೆ ಎಂಜಲಿಗೆ
ಎಂಜಲಿನಲ್ಲಿರಬಹುದು ವೈರಾಣು ಎಂದೇ?
ಮೈಕ್ರೋಸ್ಕೋಪಿನಲ್ಲಿ ನೋಡಿದರೆ
ಕೋಟಿಗಟ್ಟಲೆ ಕಾಣುತ್ತವೆ ಜೀವಿಗಳು, ಎರಡೇ, ಒಂದೇ!

ಕಂಡಾಗ ತಿನ್ನುವ ಆಸೆಯಾದರೂ ದ್ರಾಕ್ಷಿ ಗೊಂಚಲು
ಬೇಡ ಎನ್ನುತ್ತಿರುವಿರಿ - ನೆನೆದು ಯಾರದೋ ಎಂಜಲು!
ಪಾಪಗಳನ್ನು ತೊಳೆಯುವ ಗಂಗೆ
ಬರುತ್ತಾಳಲ್ಲ ನಿಮ್ಮ ಮನೆಗೆ!
ಅಡುಗೆ ಮನೆಯಲ್ಲಿ ಹುಡುಕಿ ನೋಡಿ
ಸಿಕ್ಕುತ್ತದೆ ಉಪ್ಪಿನ ಜಾಡಿ
ಬೆಚ್ಚನೆ ನೀರಿನಲ್ಲಿ ಉಪ್ಪು ಬೆರೆಸಿ
ತೊಳೆಯಿರಿ ಹಣ್ಣು ಕೊಟ್ಟ ಭೂಮಿಯನ್ನು ಸ್ಮರಿಸಿ
ಉಪ್ಪು ನೀಡಿದ ಕಡಲನ್ನು ನೆನೆದು
ಉಜ್ಜಿ ತೊಳೆದರೆ ನಾಶ ಎಲ್ಲ ಕೆಟ್ಟಕ್ರಿಮಿಜೀವಕೋಶ
ತೊಳೆದರೆ ಶುದ್ಧಜಲದಲ್ಲಿ ಮತ್ತೊಮ್ಮೆ
ನೈವೇದ್ಯಕ್ಕೆ ಸಿದ್ಧ, ಗೊಂಚಲಿನ ಹೆಮ್ಮೆ.

ದ್ರಾಕ್ಷಿಯೊಂದಿಗೆ ನಿಮ್ಮ ಭೀತಿಯನ್ನೂ ಒಂದಿಷ್ಟು
ತೊಳೆದುಬಿಡಿ ಉಪ್ಪು ನೀರಿನಲ್ಲಿಟ್ಟು.

--ಸಿ. ಪಿ. ರವಿಕುಮಾರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)