ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ (ಹಾಸ್ಯಪ್ರಬಂಧ)

Mermaid Cat Pillow Beside Plant
ಇನ್ನೂ ನನಗೆ ಒಮ್ಮೊಮ್ಮೆ ಪರೀಕ್ಷೆಯಲ್ಲಿ ಬರೆಯುತ್ತಿರುವ ಕನಸುಗಳು ಬರುತ್ತವೆ! ಕೊರೋನಾ ಭಯದಲ್ಲಿ ನಾವೆಲ್ಲರೂ ನಮ್ಮ ನಮ್ಮ ಬಿಲಗಳೊಳಗೆ ಸೇರಿಕೊಂಡಿರುವ ಈ  ಸಂದರ್ಭದಲ್ಲೂ ನನಗೆ ಇಂಥದೊಂದು ಕನಸಾಯಿತು. ಕನ್ನಡ ಪರೀಕ್ಷೆಯಲ್ಲಿ "ಈ ವಚನವನ್ನು ಕುರಿತು ಟಿಪ್ಪಣಿ ಬರೆಯಿರಿ" ಎಂಬ ಪ್ರಶ್ನೆ ಬಂದಿದೆ.

"ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ?
ತನುವಿನಲಿ ಹುಸಿ ತುಂಬಿ ಮನದಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ !"


ಇದಕ್ಕೆ ನಾನು ಉತ್ತರಿಸುತ್ತಿದ್ದೇನೆ.

ಈ ವಚನದಲ್ಲಿ ಕೋವಿಡ್ ೧೯ ಕಾಲಮಾನದಲ್ಲಿ ಮನೆಯೊಡೆಯರ  ಪಾಡನ್ನು ವಚನಕಾರರು ಮನೋಜ್ಞವಾಗಿ ಚಿತ್ರಿಸಿದ್ದಾರೆ.  ಮನೆಯಲ್ಲೇ
ಇರುವ ಮನೆಯೊಡೆಯನಿಗೆ ಒಂದೇ ಎರಡೇ ಕೆಲಸ? ಕಸ ("ರಜ") ಗುಡಿಸಬೇಕು. ಹೊಸ್ತಿಲನ್ನು ಸಾರಿಸಿ ರಂಗವಲ್ಲಿ ಹಾಕಬೇಕು. ಇವೆಲ್ಲವನ್ನೂ ಪಕ್ಕದ ಮನೆಯವರು ನೋಡುವ ಮುನ್ನವೇ ಮಾಡಿ ಮುಗಿಸಬೇಕು. ಅನಂತರ  ಅಡಿಗೆ ಇತ್ಯಾದಿ ಕೆಲಸಗಳೂ ಇಲ್ಲವೇ?

ಪ್ರಸ್ತುತ  ವಚನದಲ್ಲಿ "ರಜ" ಎಂಬ ಪದದ ವಿಶೇಷ ಪ್ರಯೋಗವನ್ನು ಗಮನಿಸಿ. ಲಾಕ್ ಡೌನ್ ಕಾಲದಲ್ಲಿ ಕೆಲವರಿಗೆ ಪ್ರತಿದಿನವೂ ರಜದಂತೆ ತೋರುತ್ತಿದೆ! ಮಕ್ಕಳಿಗೆ ರಜಾ ಬಂದರೂ ಏನು ಮಾಡಲೂ ತಿಳಿಯದೆ ಅಪ್ಪ-ಅಮ್ಮಂದಿರನ್ನು ಕಾಡುತ್ತಿದ್ದಾರೆ. ಇನ್ನು ವರ್ಕ್ ಫ್ರಮ್ ಹೋಮ್ ಅಪ್ಪ-ಅಮ್ಮಂದಿರಿಗೋ ಪ್ರತಿದಿನವೂ ಮನೆಯಿಂದಲೇ ಕೆಲಸ ಕೆಲಸ ಕೆಲಸ!  ಮನೆಯೊಳಗೇ ರಜ ತುಂಬಿದ್ದರೂ ಯಾರಿಗೂ ಕಾಲುಚಾಚಿ ಕೂಡುವ ವ್ಯವಧಾನವಿಲ್ಲ!

ಹೀಗೆ ಎಲ್ಲರೂ ವರ್ಕ್ ಫ್ರಮ್ ಹೋಮಿನಲ್ಲೇ ಮುಳುಗಿರುವಾಗ ಹೊಸ್ತಿಲಲ್ಲಿ ಹುಲ್ಲು ಹುಟ್ಟಿದರೆ ಏನಾಶ್ಚರ್ಯ? (ಹಲ್ಲು ಹುಟ್ಟಿದ್ದರೆ ಅದು ಬೇರೆ ವಿಷಯವಾಗುತ್ತಿತ್ತು).  ಎಷ್ಟಾದರೂ ನಾವು ಹುಲುಮಾನವರು!  ಹೊಸ್ತಿಲಲ್ಲಿ ಹುಲ್ಲು ಹುಟ್ಟುವುದು ಎಂಬುದರ ಸ್ವಾರಸ್ಯವನ್ನು ನೋಡೋಣ. ಮನೆಯೊಡೆಯನ ಮುಖದ ಮೇಲೆ  ಹುಟ್ಟಿ ಬೆಳೆಯುವ ಗಡ್ಡ ಬೆಳೆಯುವುದಕ್ಕೆ ಇದು ರೂಪಕವೂ ಆಗಿರಬಹುದು ಎಂದು ಅನುಮಾನ ಬರುತ್ತದೆ. ಲಾಕ್ ಡೌನ್ ಪ್ರಾರಂಭವಾದಾಗ ಈಗಾಗಲೇ ಒಂದೆರಡು ತಿಂಗಳ ಕೂದಲನ್ನು ತಲೆಯ ಮೇಲೆ ಹೊತ್ತಿದ್ದ  ಮನೆಯ ದೇವನು ಮತ್ತೊಂದು ತಿಂಗಳ ಕೂದಲನ್ನು ಬೆಳೆಸಿ ಕೂದಲ ಸಂಗಮ ದೇವನೇ ಆಗಿಹೋಗಿ ಶಿವಪೂಜೆಯಲ್ಲಿ ಬಿಟ್ಟ ಕರಡಿಯಂತೆ ಕಾಣುತ್ತಿದ್ದಾನೆ.

ಇನ್ನು "ತನುವಿನಲ್ಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ." ಮೂರೂ ಹೊತ್ತು ಫೇಕ್ ಸುದ್ದಿಗಳನ್ನು ನೋಡುತ್ತಾ ತನುವೆಲ್ಲಾ  ಹುಸಿಯಿಂದ ತುಂಬಿ ಹೋಗಿದೆ.  ಯಾವುದನ್ನು ನಂಬುವುದು ಯಾವುದನ್ನು ಬಿಡುವುದು? ಹೂ ಕ್ಯಾನ್ ಸೀ ವಾಟ್ ಈಸ್ ಹುಸೀ? ಬಿಸಿ ಸುದ್ದಿಗಳನ್ನೇ ಎಲ್ಲರೂ ಕೇಳುವುದರಿಂದ ಟಿವಿ ಮತ್ತು ಪತ್ರಿಕೆಯ ವರದಿಗಾರರು  ಹೊಸಹೊಸ ಹುಸಿಹುಸಿ ಸುದ್ದಿಗಳನ್ನೆಲ್ಲಾ ಹಸಿಹಸಿಯಾಗಿಯೇ ನಮ್ಮ ಮುಖಕ್ಕೆ ಎಸೆಯುತ್ತಿರುವುದು ಯಾರಿಗೆ ಗೊತ್ತಿಲ್ಲದ ವಿಷಯ?  ಇನ್ನು ಸಾಮಾಜಿಕ ಮಾಧ್ಯಮಗಳೇನು ಕಡಿಮೆ! ಪ್ರತಿದಿನವೂ ಬರುವ ಕೋವಿಡ್ ಅಪ್ಡೇಟ್, ಕೊರೋನಾ ಜೋಕ್ಸ್, ಗಂಡ-ಹೆಂಡತಿ ಜೋಕ್ಸ್, ಇತ್ಯಾದಿಗಳನ್ನು ಓದಿ ಓದಿ ಅವನ ಮನಸ್ಸಿನಲ್ಲಿ ನಾನಾ ವಿಷಯಗಳು ತುಂಬಿಹೋಗಿವೆ.

ಇಂಥ ಒಂದು ಸಂದರ್ಭದಲ್ಲಿ ಮನೆಯೊಳಗಿರುವ ಮನೆಯೊಡೆಯನು ತನ್ನ ಕರ್ತ್ಯವ್ಯವನ್ನು ಮರೆತು ಮನೆವಾರ್ತೆಗಳನ್ನು ನಿರ್ಲಕ್ಷಿಸಿ ಕಾಲಮೇಲೆ ಕಾಲು ಹಾಕಿ ಮೊಬೈಲ್ ಮೇಲೆ ವಾರ್ತೆಗಳನ್ನು ನೋಡುತ್ತಾ ಕುಳಿತಿದ್ದಾಗ ಮನೆಯ ಟೆಲಿಫೋನ್ ಗಂಟೆ ಬಾರಿಸುತ್ತದೆ.

ಪತಿಯ ಕಡೆಗೆ ಪತ್ನಿಯು ಕಣ್ಣಿನ ನೋಟದಲ್ಲೇ "ಉತ್ತರಿಸಿ" ಎಂದು ಹೇಳಲು ಪ್ರಯತ್ನಿಸುತ್ತಾಳೆ. ಅವನ ನಿಗಾ ಮೊಬೈಲ್ ಮೇಲೆ ನೆಟ್ಟಿದೆ.

"ರೀ!" ಎಂದು ಅವಳು ಕೂಗುತ್ತಾಳೆ.

ಅವನು ತನ್ನದೇ ಪ್ರಪಂಚದಲ್ಲಿದ್ದಾನೆ.

ಕೊನೆಗೆ ಅವಳೇ ಎದ್ದು ಫೋನ್ ರಿಸೀವ್ ಮಾಡುತ್ತಾಳೆ.

ಪತಿಗೆ ಅವನ ಬಾಸ್ ಕರೆ ಮಾಡುತ್ತಿದ್ದಾನೆ.  "ಮನೆಯೊಳಗೆ ಮನೆಯೊಡೆಯನಿದ್ದಾನೋ ಇಲ್ಲವೋ!" ಎಂದು ಕೂಗಿದ ಬಾಸ್ ಧ್ವನಿಯಲ್ಲಿ "ಎಲ್ಲಿ ಹಾಳಾಗಿಹೋದ?" ಎಂಬ ಅಸಹನೆ ಕೇಳುತ್ತಿದೆ!

"ಇವತ್ತು ಆನ್ಲೈನ್ ಮೀಟಿಂಗ್ ಇತ್ತು! ಇ-ಮೇಲ್ ಕಳಿಸಿದ್ದೆ! ಯಾಕೆ ಬರಲಿಲ್ಲ?" ಎಂದು ಬಾಸ್ ಕೇಳುತ್ತಿದ್ದಾನೆ. 

 ಅತ್ತ ಒಲೆ ಮೇಲೆ ಏನೋ ಉರಿಯುತ್ತಿದೆ. ಸುಟ್ಟ ವಾಸನೆ ಬರುತ್ತಿದೆ.  ಮನೆಯೊಡೆಯನೋ, ಮೊಬೈಲ್ ಮುಖದ ಮೇಲೆ ಬೆರಳು ನೇವರಿಸುತ್ತಾ ಸುಖಾಸ್ವಾದನೆಯಲ್ಲಿದ್ದಾನೆ. ಯಾವುದೋ ಜೋಕ್ ಓದಿ ನಗುತ್ತಿದ್ದಾನೆ. 

ಒಲೆ ಹತ್ತಿ ಉರಿದಡೆ ನಿಲಬಹುದಲ್ಲದೆ 
ಇ-ಓಲೆ ಹತ್ತಿ ಉರಿದಡೆ ನಿಲಲಾರದು.

ಅದರಲ್ಲೂ ಬಾಸ್ ಕಳಿಸಿದ ಗರಂ ಇ-ಓಲೆಯನ್ನು ಕಡೆಗಣಿಸಲಾಗದು ಎಂಬ ಸರಳಸತ್ಯವೂ ತನ್ನ ಪತಿಗೆ ಗೊತ್ತಾಗದೇ ಹೋಯಿತಲ್ಲ! ಈಗಂತೂ ಬಾಸ್ ಇ-ಅಂಚೆ ಮಿಂಚೆಗಳನ್ನು ಬಿಟ್ಟು ಪಂಚೆಯ ಕಚ್ಚೆ ಏರಿಸಿ  ದೂರು ವಾಣಿಗಳ ಶ್ರವಣ ಮಾಡಿಸಲು  ದೂರವಾಣಿ ಕರೆಯನ್ನೇ ಮಾಡಿಬಿಟ್ಟಿದ್ದಾನೆ! 

ಕೂಡಲೇ  ಸಮಯಪ್ರಜ್ಞೆ ಮೆರೆದ ಮನೆಯೊಡತಿ  "ನೀವು ಕರೆ ಮಾಡಿರುವ ವ್ಯಕ್ತಿ ಬೇರೊಂದು ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ!" ಎಂದು "ಮನೆಯೊಳಗೆ ಮನೆಯೊಡೆಯನಿಲ್ಲ" ಎಂಬ ಸಂದೇಶವನ್ನು ರವಾನಿಸಿ  ಕರೆಯನ್ನು ಕಟ್ ಮಾಡುತ್ತಾಳೆ.

ಹೀಗೆ ಈ ವಚನವು ಸಾರ್ವಕಾಲಿಕವಾಗಿದೆ.

ಹೀಗೆಲ್ಲಾ ಬರೆಯುತ್ತಿರುವಾಗ ಯಾರೋ ತಟ್ಟಿ ಎಬ್ಬಿಸಿದಂತಾಗಿ ಎಚ್ಚರವಾಯಿತು.

"ಇವತ್ತು ಬ್ರೇಕ್ ಫಾಸ್ಟ್ ಮಾಡುವುದು ನಿಮ್ಮ ಸರದಿ!" ಎಂದು ಹೆಂಡತಿ ಎಬ್ಬಿಸುತ್ತಿದ್ದಳು.

"ಮನೆಯೊಳಗೆ ಮನೆಯೊಡತಿ ಇದ್ದಾಳೆ!" ಎನ್ನುತ್ತಾ ಮೇಲೆದ್ದೆ.

--  ಸಿ.ಪಿ. ರವಿಕುಮಾರ್ 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)