ಶಕ್ತಿ ಮತ್ತು ಕ್ಷಮೆ

ರಾಮಧಾರಿ ಸಿಂಗ್ 'ದಿನಕರ್' ಅವರ 'ಶಕ್ತಿ ಮತ್ತು ಕ್ಷಮೆ' ಎಂಬ ಪ್ರಸಿದ್ಧ ಕವಿತೆಯ ಅನುವಾದವನ್ನು ಕೆಳಗೆ ಕೊಟ್ಟಿದ್ದೇನೆ. ದಿನಕರ್ ಅವರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿದವರು. ಬ್ರಿಟಿಷ್ ಸರಕಾರದ ವಿರುದ್ಧ ಅವರು ಜನರನ್ನು ರೊಚ್ಚಿಗೆಬ್ಬಿಸುವ ಕವಿತೆಗಳನ್ನು ಬರೆದವರು. ಗಾಂಧೀಜಿಯ ಅಹಿಂಸಾಮಾರ್ಗವನ್ನು ಕುರಿತು ಯುವಕವಿಗೆ ಅನುಮಾನಗಳಿವೆ. ಯಾರ ತೋಳಿನಲ್ಲಿ ಶಕ್ತಿ ಇಲ್ಲವೋ ಅವರ ವಿನಯ, ತ್ಯಾಗ, ಕ್ಷಮೆಗಳನ್ನು ಜನರು ಹೇಡಿತನವೆಂದೇ ಭಾವಿಸುತ್ತಾರೆ ಎನ್ನುವುದು ಕವಿಯ ವಾದ.  ಕವಿತೆಯಲ್ಲಿ ಕವಿ ಯುಧಿಷ್ಥಿರನನ್ನು ಸಂಬೋಧಿಸುತ್ತಾನೆ. ಯುಧಿಷ್ಥಿರ ದುರ್ಯೋಧನನನ್ನೂ ಕ್ಷಮಿಸುವ ಸ್ವಭಾವದವನು. ಅವನನ್ನು ಸುಯೋಧನ ಎಂದು ಕರೆಯುತ್ತಿದ್ದವನು. ಆದರೆ ಅವನ ತಾಳ್ಮೆ ಅವನಿಗೆ ಕೊಟ್ಟ ಪ್ರತಿಫಲವೇನು ಎಂದು ಕವಿ ಮೂದಲಿಸುತ್ತಾನೆ. ರಾಮಾಯಣದ ಒಂದು ಕಥೆಯನ್ನು ಕವಿ ನೆನೆಯುತ್ತಾನೆ. ಕಡಲನ್ನು ದಾಟಬೇಕಾದಾಗ ರಾಮನು ಮೂರು ದಿವಸಗಳ ಕಾಲ "ಶಾಂತನಾಗು, ಸೇತುವೆಯನ್ನು ಕಟ್ಟಲು ಅವಕಾಶ ಮಾಡಿಕೊಡು" ಎಂದು ಬೇಡಿಕೊಂಡನಂತೆ. ಸಮುದ್ರವು ರಾಮನ ಪ್ರಾರ್ಥನೆಗೆ ಓಗೊಡದೆ ಭೋರ್ಗರೆಯುತ್ತಲೇ ಇತ್ತು. ಆಗ ರಾಮನ ಬಾಣವೇ ಮಾತಾಡಿತು. ತೋಳ್ಬಲಕ್ಕೆ ಮಣಿದ ಸಾಗರ ರಾಮನ ಕಾಲಿಗೆ ಬಂದು ನಮಸ್ಕರಿಸಿ ಸೇತುವೆ ಕಟ್ಟಲು ಅನುವು ಮಾಡಿಕೊಟ್ಟಿತು. 
Ocean Wave

ಮೂಲ ಕವಿತೆ - ರಾಮಧಾರಿ ಸಿಂಗ್ ದಿನಕರ್ 
ಕನ್ನಡ ಅನುವಾದ - ಸಿ. ಪಿ. ರವಿಕುಮಾರ್ 

ಕ್ಷಮೆ, ದಯೆ, ತಪ, ತ್ಯಾಗ, ಮನೋಬಲ -
ಬಳಸಿ ಬರಿದಾದರೂ ನಿನ್ನ ಬತ್ತಳಿಕೆ
ಇಷ್ಟಾದರೂ ಹೇಳು ನರವ್ಯಾಘ್ರ ಸುಯೋಧನನು  
ಎಲ್ಲಾದರೂ ಎಂದಾದರೂ ಸೋತನೇ ನಿನಗೆ?

ಶತ್ರುವಿನ ಮುಂದೆ ಕ್ಷಮಾಶೀಲ ಗುಣ
ತಳೆದು ನೀ ವಿನಯ ಮೆರೆದಷ್ಟೂ
ನರಹೇಡಿ ನೀನೆಂದು ದುಷ್ಟ ಕೌರವರ
ನಂಬಿಕೆಯು ಬಲವಾಗುತಿತ್ತು

ಇಂಥ ಕಹಿಹಣ್ಣಲ್ಲದೇ ದೊರಕುವುದು ಬೇರೇನು
ಧರಿಸಿದರೆ ಮೌನ ಸಹಿಸುತ್ತ?
ಕೋಮಲತೆಯಲ್ಲಿ ಕಳಕೊಳ್ಳುವನು ಮನುಜ  
ಪೌರುಷದ ಸಹಜ ಆತಂಕ

ಕ್ಷಮೆಯು ಎಂದಿಗೂ ಶೋಭಿಸುವುದು ಏನಿದ್ದರೂ   
ವಿಷವುಳ್ಳ ಹಾವ ಹಣೆ ಮೇಲೆ
ಅವನಿಗೇನು ಹಲ್ಲಿಲ್ಲದವಗೆ  
ವಿಷವಿಲ್ಲದವಗೆ ಬಾಯೊಳಗೆ?

ಸಾಗರಕ್ಕೆ ಕೈಮುಗಿದು ದಾರಿ ಬಿಡು   
ಎನ್ನುತ್ತ ಶ್ರೀರಾಮಮೂರ್ತಿ
ನಯವಿನಯದಿಂದ ಕೈಮುಗಿದು ಬೇಡಿದನು
ಒಂದಲ್ಲ ಮೂರು ದಿನ ಪೂರ್ತಿ  

ಒಂದು ನಾದವೂ ಹೊರಡದಾದಾಗ
ಪ್ರಾರ್ಥನೆಗೆ ಶರಧಿಯೆದೆಯಲ್ಲಿ
ಪೌರುಷದ ಅಧೀರ ಸುಳಿಯೊಂದು ಭಗ್ಗೆಂದು  
ಹೊತ್ತಿತೋ ರಾಮಶರದಲ್ಲಿ

ಓಡೋಡಿ ಬಂದು ಕಾಲಿಗೇ ಎರಗಿತು
ಕಾಪಾಡು, ಕ್ಷಮಿಸು ಕ್ಷಮಿಸೆಂದು,
ಪಾದ ತೊಳೆದು ಕೈಂಕರ್ಯಭಾವದೊಳು
ನಿಂತು ಕೈಕಟ್ಟಿ ಸಿಂಧು

ನಿಜವೆಂದರೆ ಶರದಲ್ಲೇ ಇರುವುದು
ವಿನಯದ ಬೆಳಗುವ ದೀಪ್ತಿ
ಸಂಧಿ ಮಾತು ಸಂಪೂಜ್ಯ ಅವರಿಗೇ
ಯಾರಲ್ಲಿದೆಯೋ ಜಯಿಸುವ ಶಕ್ತಿ

ಸಹನಶೀಲತೆ, ಕ್ಷಮೆ, ದಯೆಗಳನು
ಕೊಂಡಾಡುವುದು ವಿಶ್ವ ಯಾವಾಗ?
ತೋಳ್ಬಲದ ದರ್ಪ  ನೇಪಥ್ಯದಲ್ಲಿ
ಜಗಮಗಿಸಿ  ಹೊಳೆಯುತಿರುವಾಗ 


(c) ಸಿ. ಪಿ. ರವಿಕುಮಾರ್ (೨೦೧೯)


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)