ವ್ಯಾಲೆಂಟೈನ್ಸ್ ಡೇ

Red Rose on Brown Wooden Surface
ಮಹಿಮಾ ಕಾಲೇಜಿನ ಲೈಬ್ರರಿಯಲ್ಲಿ ಗ್ರಂಥಪಾಲಕಿಯಾಗಿದ್ದಾಳೆ. ಹೆಚ್ಚು ಜನ ವಿದ್ಯಾರ್ಥಿಗಳು ಈಗೀಗ ಇಂಟರ್ನೆಟ್ ಮೇಲೆ ಸಿಕ್ಕುವ ಪುಸ್ತಕ ಮತ್ತು ನೋಟ್ಸ್ ಇವುಗಳನ್ನೇ ಆಧರಿಸಿದ ಕಾರಣ ಲೈಬ್ರರಿ ಹೆಚ್ಚುಕಡಿಮೆ ವರ್ಷಪೂರ್ತಿ ಬಿಕೋ ಎನ್ನುತ್ತಿತ್ತು. ಪರೀಕ್ಷೆಯ ಮುನ್ನಾದಿನಗಳಲ್ಲಿ ಮಾತ್ರ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿರುತ್ತಿದ್ದರು. ಇನ್ನುಳಿದ ದಿನಗಳಲ್ಲಿ ಕಾಲೇಜಿನ ಉಪಾಧ್ಯಾಯರು ಹೆಚ್ಚಾಗಿ ಬರುತ್ತಿದ್ದರು.

ಸುನಿಲ್ ಕಾಲೇಜಿನ ಕೆಮಿಸ್ಟ್ರಿ ವಿಭಾಗಕ್ಕೆ ಸಹಾಯಕ ಪ್ರಾಧ್ಯಾಪಕನಾಗಿ ಸೇರಿದ್ದಾನೆ. ಅವನು ಆಗಾಗ ಲೈಬ್ರರಿಗೆ ಬರುತ್ತಾನೆ. ಇಂಥ ಪುಸ್ತಕ ಇದೆಯೇ, ಅದನ್ನು ಬೇರೆ ಯಾವುದಾದರೂ ಲೈಬ್ರರಿಯಿಂದ ತರಿಸಿಕೊಡಲು ಸಾಧ್ಯವೇ ಎಂದೆಲ್ಲ ಮಹಿಮಾಳನ್ನು ಕೇಳುವವರಲ್ಲಿ ಅವನು ಬಹುಶಃ ಮೊದಲಿಗ. ಉಳಿದವರು ಏನಿದ್ದರೂ ತಾವೇ ಕಪಾಟಿಗೆ ಹೋಗಿ ತಮಗೆ ಬೇಕಾದ ಪುಸ್ತಕವನ್ನು ತೆಗೆದುಕೊಂಡು ಹೋಗುತ್ತಿದ್ದರು. ಸಂಶೋಧನೆಗಾಗಿ ಸುನಿಲ್ ಯಾವುದೋ ಕೇಳರಿಯದ ಪುಸ್ತಕಗಳಿಗಾಗಿ ಬೇಡಿಕೆ ಇಡುತ್ತಿದ್ದ. ಅವಳಿಗೂ ಇದೊಂದು ಚಾಲೆಂಜ್ ಎನ್ನಿಸಿ ಸಾಧ್ಯವಾದಷ್ಟು ಬೇಗ ಅವನಿಗೆ ಪುಸ್ತಕಗಳನ್ನು ತಂದು ಒದಗಿಸಲು ಉತ್ಸಾಹ ತೋರಿಸುತ್ತಿದ್ದಳು.
ಅಂದು ಕೂಡಾ ತಾನು ಬೇರೆ ಕಾಲೇಜಿನ ಲೈಬ್ರರಿಯಿಂದ ತರಿಸಿದ ಒಂದು ಸಂಶೋಧನಾ ಪ್ರಬಂಧವನ್ನು ಅವನಿಗೆ ಕೊಡುವ ಉತ್ಸಾಹದಲ್ಲಿ ಅವಳು ಫೋನ್ ಮಾಡಿದಳು. ತನ್ನ ಮೊಬೈಲ್ ನಂಬರ್ ಅವನು ಇವಳಿಗೆ ಕೊಟ್ಟಿದ್ದಾನೆ.

"ಓ ಲೈಬ್ರರಿಯನ್ ಮೇಡಂ! ಹೇಳಿ'

"ನೀವು ಕೇಳಿದ ಪುಸ್ತಕ ಬಂದಿದೆ!'

"ಥ್ಯಾಂಕ್ಸ್ ಮೇಡಂ. ಸಂಜೆ ಬಂದು ತೊಗೊಂಡು ಹೋಗ್ತೀನಿ."

ಸಂಜೆ ಬಂದವನು ಅವಳನ್ನು ನೋಡಿ ಮುಗುಳ್ನಕ್ಕ. ಅವಳು ಲಗುಬಗೆಯಿಂದ ಎದ್ದು ಅವನು ಕೇಳಿದ್ದ ಪುಸ್ತಕವನ್ನು ಕಪಾಟಿನಿಂದ ತೆಗೆದು ಕೈಚಾಚಿದಳು. ಅವನು ಕೂಡಾ ಕೈಚಾಚಿ ಅವಳಿಗೆ ತನ್ನ ಲೈಬ್ರರಿ ಕಾರ್ಡ್ ಕೊಟ್ಟ. ಅದನ್ನು ಸ್ವೀಕರಿಸಿ ಅವಳು ಮೇಜಿನ ಸೆಳೆಖಾನೆಯಲ್ಲಿ ಸೇರಿಸುವಾಗ ಯಾಕೋ ಈ ಕಾರ್ಡ್ ವಿಭಿನ್ನವಾಗಿದೆ ಎನ್ನಿಸಿ ಅದನ್ನು ಪರಿಶೀಲಿಸಿದಳು. ಕಾರ್ಡಿನ ಮೇಲೆ ಒಂದು ಹೃದಯದ ಚಿತ್ರವಿತ್ತು. ಕೆಳಗೆ "ಹ್ಯಾಪಿ ವ್ಯಾಲೆಂಟೈನ್ಸ್ ಡೇ. ನೀವು ನನ್ನ ವ್ಯಾಲೆಂಟೈನ್ ಆಗುವಿರಾ?" ಎಂದು ಬರೆದಿತ್ತು.

ಮಹಿಮಾ ಚಕಿತಳಾಗಿ ತಲೆಯೆತ್ತಿ ಅವನ ಕಡೆಗೆ ನೋಡಿದಳು. ಸುನಿಲ್ ಮುಗುಳ್ನಗುತ್ತಿದ್ದ. ಅವಳು ಬಾಯಿ ತೆರೆಯಬೇಕೆನ್ನುವಷ್ಟರಲ್ಲಿ ಅವನು ತನ್ನ ತುಟಿಗೆ ಬೆರಳು ಹಚ್ಚಿ ಅಲ್ಲೇ ಇದ್ದ "ನಿಶಬ್ದವಾಗಿರಿ" ಎಂಬ ಬೋರ್ಡಿನ ಕಡೆಗೆ ಕೈ ತೋರಿಸಿದ. ಅವಳಿಗೆ ನಗು ಬಂತು. ಅವಳು ಮತ್ತೆ ಬಾಯಿ ತೆರೆಯಬೇಕು ಎನ್ನುವಷ್ಟರಲ್ಲಿ ಎಲ್ಲಿಂದಲೋ ಪ್ರತ್ಯಕ್ಷನಾದ ಒಬ್ಬ ಹುಡುಗ "ಮ್ಯಾಮ್, ಇದನ್ನು ಬಾರೋ ಮಾಡಬಹುದಾ?" ಎಂದು ಕೈಯಲ್ಲಿದ್ದ ಭಾರವಾದ ಪುಸ್ತಕವನ್ನು ಅವಳಿಗೆ ತೋರಿಸಿದ.

ಅವಳು ಅದನ್ನು ಪರಿಶೀಲಿಸಿ "ಇಲ್ಲ, ಇದು ಆಕರಗ್ರಂಥ. ಇಲ್ಲೇ ಲೈಬ್ರರಿಯಲ್ಲಿ ಓದಿಕೊಳ್ಳಬೇಕು" ಎಂದು ತಗ್ಗಿದ ಧ್ವನಿಯಲ್ಲಿ ಹೇಳಿದಳು.

ವಿದ್ಯಾರ್ಥಿ ಸುಮ್ಮನಾಗದೆ "ರೆಫರೆನ್ಸ್ ಬುಕ್ ಅಂತ ಎಲ್ಲಿ ಬರೆಸಿದೆ ಮ್ಯಾಮ್?" ಎಂದು ಕೆಣಕಿದ. ಅವಳು ತಾಳ್ಮೆಯಿಂದ ಪುಸ್ತಕದ ಮೊದಲ ಪುಟವನ್ನು ತೆಗೆದಳು. ನಿಜ! ಅಲ್ಲಿ ಮುದ್ರೆ ಒತ್ತುವುದನ್ನು ಸಿಬ್ಬಂದಿಯವರು ಮರೆತಿದ್ದರು. ಅವಳು ತನ್ನ ಕಂಪ್ಯೂಟರ್ ಮುಂದೆ ಆಸೀನಳಾಗಿ ಹುಡುಕಾಡಿ "ಸಾರಿ, ರಬ್ಬರ್ ಸ್ಟಾಂಪ್ ಹಾಕೋದು ಮರೆತಿದ್ದಾರೆ" ಎಂದು ಮೇಜಿನ ಸೆಳೆಖಾನೆಯಿಂದ ಒಂದು ಸ್ಟಾಂಪ್ ಹುಡುಕಿ ತೆಗೆದು ಅದನ್ನು ಇಂಕ್ ಪ್ಯಾಡಿನಲ್ಲಿ ಅದ್ದಿ ಮೊದಲ ಪುಟದ ಮೇಲೆ ಒತ್ತಿದಳು. "ನಾಟ್ ಫಾರ್ ಸರ್ಕ್ಯುಲೇಷನ್" ಎಂಬ ಬರಹವನ್ಮು ನೋಡಿ ವಿದ್ಯಾರ್ಥಿ ಸ್ವಲ್ಪ ಅಸಮಾಧಾನದಿಂದ ಹೊರಟುಹೋದ. ಇದೆಲ್ಲ ನಡೆಯುತ್ತಿದ್ದಾಗ ಸುನಿಲ್ ತಾಳ್ಮೆಯಿಂದ ಅಲ್ಲೇ ನಿಂತಿದ್ದ.

ಅವಳು ಮತ್ತೆ ಅವನ ಕಡೆಗೆ ನೋಡಿದಳು. ಅವನು ಅವಳ ಕಡೆಗೆ ಪ್ರಶ್ನಾರ್ಥಕವಾಗಿ ನೋಡಿದ. ಅವಳು ಏನು ಹೇಳಬೇಕೋ ತೋರದೆ "ಮನೆಯಲ್ಲಿ ಕೇಳಬೇಕು" ಎಂದು ತಲೆ ತಗ್ಗಿಸಿದಳು. ಅವನು ""ನೋ ಪ್ರಾಬ್ಲಮ್! ನಾಳೆ ಬೆಳಗ್ಗೆ ತಿಳಿಸಿದರೂ ಸಾಕು! ಸಂಜೆ ಇಲ್ಲೇ ಮಾಲ್‌‌ಗೆ ಹೋಗುವ ಪ್ರೋಗ್ರಾಮ್, ಅಷ್ಟೇ. ನಿಮ್ಮನ್ನು ಒಂಬತ್ತು ಗಂಟೆ ಒಳಗಾಗಿ ಮನೆಗೆ ಡ್ರಾಪ್ ಮಾಡ್ತೀನಿ" ಎಂದು ಅವಳ ಉತ್ತರಕ್ಕೂ ಕಾಯದೆ ಹೊರಟೇಹೋದ.

ಮಹಿಮಾಳ ಮನಸ್ಸು ಕಲ್ಲೋಲವಾಯಿತು. ಹೀಗೆ ತನಗೆ ಪರಿಚಯದವರೊಬ್ಬರು ವ್ಯಾಲೆಂಟೈನ್ ದಿವಸ ತನ್ನನ್ನು ಜೊತೆಗೆ ಕರೆದೊಯ್ಯಲು ಕೋರಬಹುದು ಎಂದು ಅವಳೆಂದೂ ಊಹಿಸಿರಲಿಲ್ಲ. ಇಷ್ಟಾಗಿ ಅವಳಿಗೆ ವ್ಯಾಲೆಂಟೈನ್ ದಿವಸದ ಬಗ್ಗೆ ಹೆಚ್ಚಿನ ಆಸ್ಥೆಯೂ ಇರಲಿಲ್ಲ. ಇನ್ನೂ ಇಪ್ಪತ್ತರ ಅಂಚಿನಲ್ಲಿದ್ದ ವಿದ್ಯಾರ್ಥಿಗಳು ವ್ಯಾಲೆಂಟೈನ್ಸ್ ಡೇ ಎಂದು ಸಂಭ್ರಮ ಪಡುವುದನ್ನು ಅವಳು ನೋಡಿದ್ದಾಳೆ. ಕಾಲೇಜಿನಲ್ಲಿ ಅಂದು ಚಾಕೊಲೇಟ್, ಗುಲಾಬಿ, ಬಲೂನ್ ಇವುಗಳ ಮಾರಾಟ ಕೂಡಾ ಜೋರು. ವಿದ್ಯಾರ್ಥಿನಿಯರು ಅಂದು ವಿಶೇಷವಾಗಿ ಅಲಂಕರಿಸಿಕೊಂಡು ಬರುವುದೂ ಒಂದು ರೂಢಿಯಾಗಿದೆ. ಅಧ್ಯಾಪಕರು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಮೇಲೆ ಒಂದು ಕಣ್ಣಿಟ್ಟಿರಬೇಕೆಂದು ಪ್ರಿನ್ಸಿಪಾಲ್ ಎಲ್ಲರಿಗೂ ಸಂದೇಶ ಕಳಿಸಿದ್ದಾರೆ. ಇಲ್ಲಿ ನೋಡಿದರೆ ಸ್ವತಃ ಅಧ್ಯಾಪಕನೇ ಆದ ಸುನಿಲ್ ತನ್ನನ್ನು ಹೊರಗೆ ಕರೆದೊಯ್ಯಲು ಆಹ್ವಾನ ನೀಡಿದ್ದಾನೆ! ಸುನಿಲ್ ರಾವ್ ಅಮೆರಿಕಾದ ಇಲಿನಾಯ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಮುಗಿಸಿಕೊಂಡು ಹೊಸದಾಗಿ ಸಹಾಯಕ ಪ್ರಾಧ್ಯಾಪಕನ ಹುದ್ದೆಗೆ ನೇಮಕಗೊಂಡಿದ್ದಾನೆ. ಇನ್ನೂ ಒಂದು ವರ್ಷವೂ ಕಳೆದಿಲ್ಲ. ಬಹಳ ಒಳ್ಳೆಯ ಸಂಶೋಧಕ, ಅತ್ಯುತ್ತಮ ಟೀಚರ್ ಎಂದು ವಿದ್ಯಾರ್ಥಿಗಳು ಅವನನ್ನುಹೊಗಳುತ್ತಾರೆ. ಅವನ ಜನಪ್ರಿಯತೆಯನ್ನು ಕಂಡು ಅಸಮಾಧಾನ ಪಟ್ಟುಕೊಳ್ಳುವವರೂ ಇದ್ದಾರೆ. ಆದರೆ ತನ್ನ ಹಾಸ್ಯ ಸ್ವಭಾವದಿಂದ ಅವನು ಎಲ್ಲರನ್ನೂ ಗೆದ್ದುಕೊಂಡಿದ್ದಾನೆ.

ಇಂದಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪರಸ್ಪರ ಮುಕ್ತವಾಗಿ ವ್ಯವಹರಿಸುವುದನ್ನು ನೋಡಿ ಮಹಿಮಾ ಆಶ್ಚರ್ಯ ಪಡುತ್ತಾಳೆ. ತನ್ನನ್ನು ಅಪ್ಪ ಅಮ್ಮ ಬೆಳೆಸಿದ ವಾತಾವರಣವೇ ಬೇರೆ! ಹೀಗೆಲ್ಲ ಹುಡುಗರೊಂದಿಗೆ ಓಡಾಡುವುದು ಹಾಗಿರಲಿ, ಮಾತಾಡಲೂ ಅವಳಿಗೆ ಧೈರ್ಯವಿರಲಿಲ್ಲ. ಲೈಬ್ರರಿಯಲ್ಲಿ ಕೆಲಸಕ್ಕೆ ಸೇರಿದ ಮೇಲೆ ಅನಿವಾರ್ಯವೆಂಬಂತೆ ಅವಳು ಎಲ್ಲರೊಂದಿಗೆ ಸಂಭಾಷಿಸುತ್ತಾಳೆ. ತನಗೆ ಮದುವೆ ಆಗಿಲ್ಲವೆನ್ನುವುದೇ ಮನೆಯಲ್ಲಿ ಅಪ್ಪ ಅಮ್ಮನಿಗೆ ಒಂದು ಕೊರಗು. ಅವರು ಪಟ್ಟ ಪ್ರಯತ್ನಗಳು ಒಂದೇ ಎರಡೇ! ಕಂಡಕಂಡವರಿಗೆ ಜಾತಕ ಕೊಟ್ಟು ಯಾರಾದರೂ ಸರಿಯಾದ ವರ ಇದ್ದರೆ ಹೇಳಿ ಎಂದು ಬೇಡಿಕೊಳ್ಳುತ್ತಾರೆ. ಅದೆಷ್ಟು ತೀರ್ಥಯಾತ್ರೆಗಳು ಮುಗಿದಿವೆಯೋ, ಅದೆಷ್ಟು ವ್ರತಗಳ ಆಚರಣೆಯಾಗಿದೆಯೋ ಅವಳಿಗೆ ಲೆಕ್ಕವಿಲ್ಲ.

ಅವಳಿಗೆ ಮದುವೆಯಾಗಿಲ್ಲ ಎನ್ನುವುದೇ ಅವಳ ಎಷ್ಟೋ ಮಂದಿ ಸಹಪಾಠಿಗಳಿಗೆ ಬಿಡಿಸಲಾಗದ ಗಂಟು. ಮಹಿಮಾ ನೋಡಲು ಸುಂದರಿ. ಒಳ್ಳೆಯ ವಿದ್ಯಾರ್ಥಿನಿ. ಉತ್ತಮ ನಡತೆ. ಒಳ್ಳೆಯ ಚಿತ್ರಕಲಾವಿದೆ. ಇಷ್ಟಾದರೂ ಅವಳಿಗೆ ಮದುವೆ ಯಾಕಾಗಿಲ್ಲ! ಹೀಗೆ ಸಮಾಜದವರು ಅವಳ ಕಡೆಗೆ ಅನುಮಾನದಿಂದ ನೋಡಿದಾಗ ಅವಳಿಗೆ ಹಿಂದೆ ಚೇಳು ಕುಟುಕಿದ ಹಾಗಾಗುತ್ತಿತ್ತು. ಅವರ ಕಲ್ಪನೆಯಲ್ಲಿ ಅದೇನೇನು ಓಡಾಡುತ್ತಿತ್ತೋ!
ಮಹಿಮಾಳಿಗೆ ಮದುವೆಯ ಭಾಗ್ಯ ಒದಗಿ ಬರಲೇ ಇಲ್ಲ ಎಂಬುದೇನೂ ನಿಜವಲ್ಲ. ಅವಳ ನೆನಪು ಮೂರು ವರ್ಷಗಳಷ್ಟು ಹಿಂದಕ್ಕೆ ಓಡಿತು.
* * *

ಮಹಿಮಾ ಅವತ್ತು ಕಾಲೇಜಿನಿಂದ ಬಂದಾಗ ಅವಳ ತಾಯಿ ಅವಳನ್ನೇ ಸಂಭ್ರಮದಿಂದ ಎದುರುನೋಡುತ್ತಿದ್ದರು. ಕಾಫಿ ಕುಡಿಯುವಾಗ "ಮಹಿಮಾ, ನಿನಗೊಂದು ಸಿಹಿ ಸುದ್ದಿ" ಎಂದರು. ಅವರು ಹೇಳಿದ ಸುದ್ದಿ ಕೇಳಿ ಮಹಿಮಾಳಿಗೆ ಹೇಗೆ ಪ್ರತಿಕ್ರಯಿಸಬೇಕೋ ಗೊತ್ತಾಗಲಿಲ್ಲ. ಅವಳ ಮದುವೆಯನ್ನು ಬಿಟ್ಟು ಬೇರೇನೂ ಯೋಚಿಸದ ಅಪ್ಪ ಅವಳ ಹೆಸರನ್ನು ಒಂದು ಮ್ಯಾಟ್ರಿಮೋನಿಯಲ್ ವೆಬ್ ತಾಣದಲ್ಲಿ ನೋಂದಾಯಿಸಿದ್ದರು. ಅವಳೊಂದಿಗೆ ವಿವಾಹವಾಗಲು ಆಸಕ್ತಿಯುಳ್ಳವರಿಂದ ಅನೇಕ ಪ್ರಸ್ತಾಪಗಳೂ ಬಂದಿದ್ದವು. ಅಪ್ಪ ಅವರೊಂದಿಗೆ ಮೊದಲು ತಾವೇ ಮಾತಾಡುತ್ತಿದ್ದರು. ಪ್ರತಿದಿನವೂ ಊಟಕ್ಕೆ ಕುಳಿತಾಗ ತಾವು ಇಂಟರ್ವ್ಯೂ ಮಾಡಿದ ಹುಡುಗರ ಬಗ್ಗೆ ಹೇಳುತ್ತಿದ್ದರು. ಎಷ್ಟೋ ಜನರನ್ನು ಅವರೇ ಬೇಡವೆಂದು ತಳ್ಳಿಹಾಕುತ್ತಿದ್ದರು. ಅವರಿಗೆ "ಪರವಾಗಿಲ್ಲ" ಎನ್ನುವ ಪ್ರಸ್ತಾಪಗಳನ್ನು ಮಹಿಮಾ ತಳ್ಳಿಹಾಕುತ್ತಿದ್ದಳು. ಒಬ್ಬಳೇ ಮಗಳೆಂದು ಅಕ್ಕರೆಯಿಂದ ಬೆಳೆಸಿದ ತಂದೆತಾಯಿಗೆ ಅವಳನ್ನು ಇಷ್ಟವಿಲ್ಲದ ಕಡೆಗೆ ಕೊಡಲು ಮನಸ್ಸು ಬರುತ್ತಿರಲಿಲ್ಲ.

ಅಂದು ಅಪ್ಪ ಒಬ್ಬ ಹುಡುಗನ ಜೊತೆ ಸ್ಕೈಪ್ ಮೂಲಕ ಮಾತಾಡಿಕೊಂಡು ಬಂದಿದ್ದರು. ಹುಡುಗ ಅಮೆರಿಕಾದಲ್ಲಿ ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ. ಮಾಡುತ್ತಿದ್ದಾನೆ. ಕೊನೆಯ ವರ್ಷ. ಈಗಾಗಲೇ ಅವನಿಗೆ ಒಂದೆರಡು ಕಂಪೆನಿಗಳಿಂದ ಕೆಲಸದ ಆಫರ್ ಇದೆ. ನೋಡಲು ಸ್ಫುರದ್ರೂಪಿ. ಉತ್ಸಾಹದಿಂದ ಮಾತಾಡಿದ. ತಂದೆತಾಯಿ ಮೂಲತಃ ಬೆಂಗಳೂರಿನವರೇ ಆದರೂ ಈಗ ಮುಂಬೈ ನಗರದಲ್ಲಿದ್ದಾರೆ. ಹುಡುಗನ ಅಜ್ಜಿಗೆ ತುಂಬಾ ವಯಸ್ಸಾಗಿದೆ. ಅವರು ಮೊಮ್ಮಗನ ಮದುವೆ ನೋಡುವ ಆಸೆ ಇಟ್ಟುಕೊಂಡಿದ್ದಾರೆ. ಹೀಗಾಗಿ ತಂದೆ ಆದಷ್ಟೂ ಬೇಗ ಮಗನ ಮದುವೆ ಮಾಡುವ ಇರಾದೆ ಹೊಂದಿದ್ದಾರೆ. ವಿಶೇಷವೆಂದರೆ ಮಹಿಮಾಳ ಫೋಟೋ ಮತ್ತು ಬಯೋಡೇಟಾ ನೋಡಿಯೇ ಹುಡುಗ ಮದುವೆಗೆ ಒಪ್ಪಿಗೆ ಕೊಟ್ಟಿರುವುದು!

ಅಮ್ಮ ಇದನ್ನೆಲ್ಲಾ ಹೇಳುತ್ತಿದ್ದಾಗ ಕಾಫಿಯ ರುಚಿ ಯಾಕೋ ಹೆಚ್ಚಿದಂತೆ ತೋರಿತು. ಆದರೂ ಮನಸ್ಸಿನಲ್ಲಿ ಆತಂಕ. ದೂರದ ಅಮೆರಿಕಾಗೆ ಪ್ರಯಾಣ ಮಾಡುವ ಯೋಚನೆ ಅವಳಿಗೆ ಕನಸಿನಲ್ಲೂ ಬಂದಿರಲಿಲ್ಲ. ಅಪ್ಪ ಅಮ್ಮನನ್ನು ಬಿಟ್ಟು ಅಷ್ಟು ದೂರ ಹೋಗುವ ಯೋಚನೆಯೇ ಅವಳಿಗೆ ಭಾರವಾಗಿ ಕಂಡಿತು. ಅವಳ ಸ್ನೇಹಿತೆ ನಂದಿನಿಗೆ ಆದ ಅನುಭವ ಅವಳ ಮನಸ್ಸನ್ನು ಇನ್ನೂ ಆಕ್ರಮಿಸಿಕೊಂಡಿತ್ತು. ಸಂಭ್ರಮದಿಂದ ಅಮೆರಿಕಾ ವರನನ್ನು ಮದುವೆಯಾಗಿ ಹೋದ ನಂದಿನಿ ಅವನ ಜೀವನಶೈಲಿಗೆ ಹೊಂದಿಕೊಳ್ಳಲಾರದೆ ಕೊನೆಗೆ ವಿಚ್ಛೇದನ ಪಡೆದುಕೊಂಡು ಭಾರತಕ್ಕೆ ಮರಳಿದಳು. ಸಂಪ್ರದಾಯಸ್ಥ ಕುಟುಂಬದಲ್ಲಿ ಬೆಳೆದ ತನಗೆ ಅಲ್ಲಿಯ ವಾತಾವರಣ ಹೊಂದುವುದೇ? ಹುಡುಗನ ನಿಜವಾದ ವ್ಯಕ್ತಿತ್ವ ಎಂಥದ್ದೋ? ದೂರದಿಂದ ಎಲ್ಲರೂ ಚೆನ್ನಾಗೇ ಕಾಣುತ್ತಾರೆ, ಚೆನ್ನಾಗೇ ಮಾತಾಡಿಸುತ್ತಾರೆ.

ಅವಳ ಆಲೋಚನೆಯನ್ನು ಅರ್ಥ ಮಾಡಿಕೊಂಡ ಅಪ್ಪ "ನೋಡು ಮಹಿಮಾ, ಅವನ ಜೊತೆ ನೀನು ಒಂದು ಸಲ ಸ್ಕೈಪ್ ಮೇಲೆ ಮಾತಾಡು, ನಿನಗೆ ಸರಿ ಎನ್ನಿಸಿದರೆ ಮುಂದುವರೆಯೋಣ" ಎಂದರು. ಭರತ್ ಜೊತೆ ಅವಳು ಕೊನೆಗೂ ಮಾತಾಡಲು ಒಂದು ಮುಹೂರ್ತ ನಿರ್ಧಾರವಾಯಿತು. ಒಂದೇ ಮಾತುಕತೆಯಲ್ಲಿ ಅವನಿಗೆ ಅವಳು ಮನಸೋತಳು. ಅವನ ಕಣ್ಣುಗಳಲ್ಲಿ ಇಣುಕುತ್ತಿದ್ದ ಸಾಚಾತನ ಅವನು ತನಗೆ ಸೂಕ್ತ ಜೊತೆಗಾರ ಎಂದು ಅವಳಿಗೆ ಹೇಳಿತು. ಅಂದು ರಾತ್ರಿ ಊಟದ ಸಮಯದಲ್ಲಿ "ಏನಮ್ಮಾ, ಏನು ಯೋಚನೆ ಮಾಡಿದೆ?" "ಎಂದು ಅಪ್ಪ ಕೇಳಿದಾಗ ಅವಳು ಸುಮ್ಮನೆ ತಲೆ ಕೆಳಗೆಹಾಕಿಕೊಂಡು ಕೂತಳು. ಅಮ್ಮ ನಗುತ್ತಾ "ಹಾಗಾದ್ರೆ ಒಪ್ಪಿದಳು ಅಂತಲೇ ಅರ್ಥ!" ಎಂದಳು.

"ನೋಡಿ, ನೀವು ಈಗಲೇ ಎಲ್ಲರಿಗೂ ಇದನ್ನೆಲ್ಲಾ ಹೇಳಬಾರದು, ಮದುವೆ ಎಲ್ಲಾ ಗೊತ್ತಾದ ಮೇಲೆ ಹೇಳೋಣ" ಎಂದು ಮಹಿಮಾ ಖಂಡಿತವಾಗಿ ಹೇಳಿದಳು. ಅವರೂ ಇದಕ್ಕೆ ಒಪ್ಪಿದರು.

ಮುಂದಿನ ದಿನಗಳು ಅದೆಷ್ಟು ಬೇಗ ಬೇಗ ಸಾಗಿದವು! ಪ್ರತಿದಿನ ಭರತ್ ಅವಳಿಗೆ ಏನಾದರೂ ಸಂದೇಶ ಕಳಿಸುತ್ತಿದ್ದ. ತನ್ನ ಪಿಎಚ್.ಡಿ. ಬಗ್ಗೆ, ತನ್ನ ಸಂಶೋಧನೆಗೆ ಸಲಹೆ ನೀಡುವ ಪ್ರಾಧ್ಯಾಪಕ ವಿಲಿಯಂ ಸ್ಮಿತ್ ಬಗ್ಗೆ, ಅವರನ್ನು ತಾವು ಬಿಲ್ ಎಂದು ಕರೆಯುವ ಬಗ್ಗೆ, ತಾನು ಬರೆಯುತ್ತಿರುವ ಸಂಶೋಧನಾ ಲೇಖನದ ಬಗ್ಗೆ. ಅವಳ ಬಗ್ಗೆ ನೂರೆಂಟು ಪ್ರಶ್ನೆ ಕೇಳುತ್ತಿದ್ದ. ತನ್ನ ತಂದೆ, ತಾಯಿ, ಅಜ್ಜಿ, ಅಕ್ಕ, ಭಾವ, ಇವರೆಲ್ಲರ ಬಗ್ಗೆ ಹರಟೆ ಹೊಡೆಯುತ್ತಿದ್ದ. "ಇನ್ನೂ ಈಗ ನವೆಂಬರ್. ಆಗಲೇ ತುಂಬಾ ಚಳಿ! ಮೇ ಯಾವಾಗ ಬರುತ್ತೋ ಎಂದು ಕಾಯುತ್ತಿದ್ದೇನೆ!" "ಇಲ್ಲಿ ಹಿಮ ನೋಡು ಹೇಗೆ ಬಿದ್ದಿದೆ! ಇದನ್ನೆಲ್ಲಾ ನಾನೇ ಗುಡಿಸಬೇಕು!" "ನೆನ್ನೆ ಬ್ರಾಡ್ವೇ ನಾಟಕ ನೋಡಿದೆ" "ಕ್ರಿಸ್ಮಸ್ ಹಬ್ಬ ಇಲ್ಲಿ ತುಂಬಾ ವಿಶೇಷ. ಮುಂದಿನ ವರ್ಷ ನಾವಿಬ್ಬರೂ ಒಟ್ಟಿಗೆ ಶಾಪಿಂಗ್ ಮಾಡೋಣ" "ಹ್ಯಾಪಿ ನ್ಯೂ ಇಯರ್ ಮಹಿಮಾ, ಈ ವರ್ಷ ನನ್ನ ಮದುವೆ! ಅರೆ, ನಿನ್ನದೂ ಇದೇ ವರ್ಷವಂತೆ?!" ...

"ಫೆಬ್ರುವರಿ ತಿಂಗಳಲ್ಲಿ ವ್ಯಾಲೆಂಟೈನ್ಸ್ ಡೇ ಬರುತ್ತದೆ. ನಿನಗೆ ಏನೋ ಒಂದು ವಿಶೇಷ ಉಡುಗೊರೆ ಕಳಿಸಿದ್ದೇನೆ."
ಉಡುಗೊರೆಯೂ ಬಂತು. ಬೆಲೆಬಾಳುವ ಗಡಿಯಾರ. ಆದರೆ ಅದನ್ನು ಅವಳೆಂದೂ ಕಟ್ಟಲೇ ಇಲ್ಲ. ವ್ಯಾಲೆಂಟೈನ್ಸ್ ಡೇ ಬರುವ ಮೊದಲೇ ಅವಳ ಪಾಲಿಗೆ ಕಾಲವು ಸ್ಥಬ್ಧವಾಗಿಹೋಯಿತು. ಕನಸುಗಳು ಹೇಗೆ ಸಾಗರದ ತೆರೆಗಳ ಹಾಗೆ ಮೇಲೆದ್ದು ಬಂದವೋ ಹಾಗೆಯೇ ಹಿಂಜರಿದು ಮಾಯವಾಗಿಹೋದವು.
* * *

ಹಳೆಯದನ್ನು ನೆನೆದು ಮಹಿಮಾಳ ಕಣ್ಣುಗಳು ತೇವಗೊಂಡವು. ಇದೆಲ್ಲವನ್ನೂ ತಾನು ಮರೆತುಬಿಡಬೇಕು ಎಂದು ಅವಳು ಮಾಡಿದ ನಿರ್ಧಾರ ಇಂದು ಕುಸಿಯಿತು. ಮಾನಸಿಕ ಆಘಾತದಿಂದ ಕುಗ್ಗಿಹೋದಾಗ ಅಪ್ಪ ಅಮ್ಮ ಅವಳಿಗೆ ನಾನಾ ರೀತಿಗಳಿಂದ ಬುದ್ಧಿವಾದ ಹೇಳಿದರು. ಅದೆಷ್ಟೋ ತೀರ್ಥಯಾತ್ರೆಗಳಾದವು. ಕಾಲ ಎಲ್ಲವನ್ನೂ ಮರೆಸುತ್ತದೆ ಎನ್ನುತ್ತಾರೆ. ಬಹುಮಟ್ಟಿಗೆ ಅದು ನಿಜವೂ ಆಯಿತು. ಲೈಬ್ರರಿಯ ಕೆಲಸಗಳಲ್ಲಿ ಮಹಿಮಾ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಳು. ಕಾಲೇಜಿನ ಆಡಲಿತಮಂಡಳಿ ಅವಳ ದಕ್ಷತೆಯನ್ನು ಗುರುತಿಸಿ ಅವಳಿಗೆ ಪುರಸ್ಕಾರವನ್ನೂ ಕೊಟ್ಟಿತು. ಆದರೂ ಆಗಾಗ ಯಾರಾದರೂ ಅವಳ ಮದುವೆಯ ವಿಷಯ ತೆಗೆದಾಗ ಅವಳಿಗೆ ಮತ್ತೊಮ್ಮೆ ಹಳೆಯ ನೆನಪುಗಳು ಕಾಡುತ್ತವೆ. ಆದರೆ ಕ್ರಮೇಣ ಅವಳು ಇಂಥ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದು ಎಂಬುದನ್ನು ಕಂಡುಕೊಂಡಿದ್ದಾಳೆ. ಕೆಲವರಿಗೆ "ಮದುವೆಗೇನು, ಟೈಮ್ ಬಂದಾಗ ಆಗುತ್ತೆ!" ಎನ್ನುತ್ತಾಳೆ. ಅವರು ಮತ್ತಷ್ಟು ಕೆದಕಿದರೆ "ಇವೆಲ್ಲಾ ಸ್ವಂತದ ವಿಷಯಗಳು ಅಲ್ಲವೇ? ಅವನ್ನೆಲ್ಲ ಹಾಗೆ ಕೇಳಬಾರದು" ಎಂದು ಕಡ್ಡಿ ಮುರಿದಹಾಗೆ ಹೇಳಿಬಿಡುತ್ತಾಳೆ. ತೀರಾ ಪರಿಚಯವಿದ್ದವರು ಕೇಳಿದರೆ "ಅದಕ್ಕೂ ಕಾಲ ಬರಬೇಕು. ಹಿರಿಯರ ಆಶೀರ್ವಾದ ಬೇಕು. ನಿಮ್ಮ ಹರಕೆ ಇರಲಿ. ಮದುವೆ ಆಗುತ್ತದೆ!" ಎಂದು ಮುಗುಳ್ನಗುತ್ತಾಳೆ. ಅಪ್ಪ ಅಮ್ಮ ಈ ವಿಷಯವನ್ನು ಈಗೀಗ ತೆಗೆಯುವುದನ್ನೇ ನಿಲ್ಲಿಸಿದ್ದಾರೆ. ಅವರ ನೆಂಟರು, ಮಿತ್ರರು ಯಾವುದೋ ಹುಡುಗನ ಜಾತಕ ತಂದುಕೊಟ್ಟಾಗ ಅವರು "ಜ್ಯೋತಿಷಿಗಳಿಗೆ ತೋರಿಸಿದೆವು. ಜಾತಕಗಳು ಕೂಡುವುದಿಲ್ಲ" ಎಂದು ಸಬೂಬು ಹೇಳುವುದನ್ನು ಮಹಿಮಾ ಹೇಳಿಕೊಟ್ಟಿದ್ದಾಳೆ. ಇಷ್ಟುಮಟ್ಟಿಗಾದರೂ ಜಾತಕಗಳು ಅವರ ಪಾಲಿಗೆ ವರವಾಗಿವೆ! ಹೆಣ್ಣು ಮಗಳ ಮದುವೆ ಮಾಡಿ ಅವಳನ್ನು ಅತ್ತೆ ಮನೆಗೆ ಕಳಿಸಿಬಿಡಬೇಕು ಎಂಬುದು ಈಗ ಹಳೆಯ ಕಾಲದ ಮಾತಾಗಿದೆ. ಅದೆಷ್ಟೋ ಹೆಣ್ಣುಮಕ್ಕಳು ತಂದೆತಾಯಿಯರನ್ನು ತಾವೇ ಸಾಕುತ್ತಿದ್ದಾರೆ. ಇದೆಲ್ಲವನ್ನೂ ಮಹಿಮಾ ಅವರಿಗೆ ತಿಳಿಸಿ ಹೇಳುತ್ತಿರುತ್ತಾಳೆ.
ರಾತ್ರಿಯ ಹನ್ನೊಂದು ಗಂಟೆಯಾದರೂ ಅವಳಿಗೆ ನಿದ್ದೆ ಹತ್ತಲಿಲ್ಲ. ಸಣ್ಣಗೆ ತಲೆನೋವು. ಒಂದು ಮಾತ್ರೆ ನುಂಗಿ ಅವಳು ಕಷ್ಟ ಪಟ್ಟು ನಿದ್ರಿಸಲು ಪ್ರಯತ್ನಿಸಿದಳು. ಪಕ್ಕದಲ್ಲಿದ್ದ ಮೊಬೈಲ್ ಸದ್ದು ಮಾಡಿ ಯಾವುದೋ ಸಂದೇಶ ಬಂದಿದೆಯೆಂದು ಸೂಚಿಸಿತು. ಸರಿ, ನಿದ್ದೆಯಂತೂ ಬರುತ್ತಿಲ್ಲ! ಹೀಗೆಂದು ಅವಳು ಮೇಲೆದ್ದು ಸಂದೇಶ ಯಾರದ್ದೆಂದು ನೋಡಿದಳು. ಸುನಿಲ್ ರಾವ್!
ಅವಳ ಕೈ ಸಣ್ಣಗೆ ನಡುಗಿತು. ಇಮೇಲ್ ಸಂದೇಶವನ್ನು ತೆರೆದಾಗ ಅದೊಂದು ಸುದೀರ್ಘ ಪತ್ರವೆನ್ನುವುದನ್ನು ಗಮನಿಸಿದಳು.
ಪ್ರಿಯ ಮಹಿಮಾ, ನಿಮ್ಮನ್ನು ಹಾಗೆ ಕರೆಯಲು ಅನುಮತಿ ಕೋರುತ್ತೇನೆ. ಇದೆಂಥ ಧಾರ್ಷ್ಟ್ಯವೆಂದು ಕೋಪ ಮಾಡಿಕೊಳ್ಳಬೇಡಿ. ನಿಮ್ಮನ್ನು ವ್ಯಾಲೆಂಟೈನ್ಸ್ ಡೇ ದಿವಸ ಹೊರಗೆ ಕರೆದೊಯ್ಯಲು ಬೇಡಿಕೆ ಇಡುವಾಗ ನಾನು ಸಾಕಷ್ಟು ಅನುಮಾನದಿಂದಲೇ ಹೆಜ್ಜೆಯಿಟ್ಟೆ. ಆಗ ಹೇಗೋ ಧೈರ್ಯ ಮಾಡಿ ಕೇಳಿದೆ. ಈಗ ನೀವು ನಿರಾಕರಿಸಬಹುದು ಎಂಬ ಅಳುಕು ಬಾಧಿಸುತ್ತಿದೆ. ನೀವು ಏನೇ ನಿರ್ಧಾರ ಕೈಗೊಳ್ಳುವ ಮೊದಲು ಈ ಪತ್ರವನ್ನು ಓದಿ ಎಂದು ಕೇಳುತ್ತೇನೆ.
ನಾನು ಪಿಎಚ್.ಡಿ. ಮಾಡಿದ್ದು ಇಲಿನಾಯ್ ವಿಶ್ವವಿದ್ಯಾಲಯ. ಆದರೆ ಅದಕ್ಕೆ ಮುಂಚೆ ಎಂ.ಎಸ್. ಪದವಿ ಗಳಿಸಿದ್ದು ಸ್ಟೋನಿ ಬ್ರೂಕ್ ವಿಶ್ವವಿದ್ಯಾಲಯದಲ್ಲಿ. ಅದೇ ಯೂನಿವರ್ಸಿಟಿಯಲ್ಲಿ ನಾನು ಪಿಎಚ್.ಡಿ. ಪ್ರಾರಂಭಿಸಿ ಎರಡು ವರ್ಷ ಸಂಶೋದನೆ ಕೂಡಾ ಮಾಡಿದ್ದೆ. ನಿಮಗೆ ಇದನ್ನು ಕೇಳಿ ಕುತೂಹಲ ಕೆರಳಿರಬಹುದು. ಅದು ಸಾಧುವೇ. ನಾವಿಬ್ಬರೂ ಬಹಳ ಇಷ್ಟ ಪಡುತ್ತಿದ್ದ ಮತರೊಬ್ಬರು ಅದೇ ಸಂಸ್ಥೆಯಲ್ಲಿ ಪಿಎಚ್.ಡಿ. ಮಾಡುತ್ತಿದ್ದರು ಅಲ್ಲವೇ! ಭರತ್ ಮತ್ತು ನಾನು ಒಂದು ವರ್ಷ ಸಹಪಾಠಿಗಳಾಗಿದ್ದೆವು. ಅವನ ಬಗ್ಗೆ ನಿಮಗೆ ನಾನೇನೂ ಹೇಳಬೇಕಾಗಿಲ್ಲ. ಅಂಥ ಪಾದರಸದಂಥ ವ್ಯಕ್ತಿತ್ವ! ಎಲ್ಲರನ್ನೂ ಮೋಡಿ ಮಾಡುವ ಮಾಂತ್ರಿಕ! ನಾನೂ ಅವನೂ ಒಂದೇ ಪ್ರಯೋಗಶಾಲೆಯಲ್ಲಿ ಕೆಲಸ ಮಾಡುತ್ತಿದ್ದೆವುಮ್ ಅವನಿಂದ ಕಲಿತದ್ದು ಸಾಕಷ್ಟು. ಕನ್ನಡಿಗರೇ ಆದ್ದರಿಂದ ನನ್ನನ್ನು ತನ್ನ ಅಪಾರ್ಟ್ಮೆಂಟಿಗೆ ಕೂಡಾ ಕರೆಯುತ್ತಿದ್ದ. ತಾನು ಮಾಡಿದ ನಳಪಾಕವನ್ನು ನನಗೂ ಬಡಿಸುತ್ತಿದ್ದ. ನನಗೆ ಅಮೆರಿಕಾದ ಬಗ್ಗೆ ಅದೆಷ್ಟೋ ವಿಷಯಗಳು ತಿಳಿದದ್ದೇ ಅವನಿಂದ!
ಅವನ ಮನೆಯಲ್ಲಿ ಅವನ ಮೇಜಿನ ಮೇಲೆ ನಿಮ್ಮ ಚಿತ್ರ ನೋಡಿ "ಯಾರಿವರು?" ಎಂದು ಕೇಳಿದ್ದೆ. ಅವನು ಸಂಕೋಚದಿಂದ ತನ್ನ ಮದುವೆಯ ವಿಷಯ ಹೇಳಿದ್ದ. ಮೇ ತಿಂಗಳಲ್ಲಿ ಮದುವೆ, ನೀನೂ ಬರುತ್ತೀಯಾ ಎಂದು ಕೂಡಾ ಕೇಳಿದ್ದ. ನಿಮ್ಮ ಬಗ್ಗೆ ಅವನು ಅದೆಷ್ಟು. ಅಭಿಮಾನದಿಂದ ಮಾತಾಡಿದ! ನಿಮ್ಮ ಚಿತ್ರಕಲೆಯನ್ನು ಹೊಗಳಿದ. "ಇಲ್ಲಿ ಬಂದರೆ ಅವಳಿಗೆ ಬೇಕಾದಷ್ಟು ಕಲಿಯುವ ಅವಕಾಶಗಳು ಸಿಕ್ಕುತ್ತವೆ" ಎಂದ. ಕಲೆಯಲ್ಲಿ ಎಂ.ಎಸ್. ನೀಡುವ ಅನೇಕ ವಿಶ್ವವಿದ್ಯಾಲಯಗಳ ಬಗ್ಗೆ ಮಾಹಿತಿಯನ್ನು ಕೂಡಾ ಸಂಗ್ರಹಿಸಿಕೊಂಡಿದ್ದ. ನಿಮಗೆ ವ್ಯಾಲೆಂಟೈನ್ಸ್ ಡೇ ಉಡುಗೊರೆ ತರಲು ನಾನೂ ಅವನೊಂದಿಗೆ ಹೋಗಿದ್ದೆ. ನಿಜ ಹೇಳಲಾ? ಆ ಗಡಿಯಾರವನ್ನು ಸೆಲೆಕ್ಟ್ ಮಾಡಿದ್ದು ಕೂಡಾ ನಾನೇ.
ಅನಂತರ ನಡೆದದ್ದನ್ನು ನಿಮಗೆ ನಾನೇನು ಬೇರೆ ಹೇಳಬೇಕಾಗಿಲ್ಲ. ಲಾಸ್ ವೇಗಸ್ ನಗರದಲ್ಲಿ ನಡೆಯುವ ಒಂದು ಸಮ್ಮೇಳನಕ್ಕೆ ನಾವಿಬ್ಬರೂ ಹೋದೆವು. ಸಮ್ಮೇಳನ ಮುಗಿಸಿ ನಗರವನ್ನು ಸುತ್ತಾಡಿದೆವು. ಒಂದಷ್ಟು ಜೂಜಾಡಿ ಹಣ ಕಳೆದುಕೊಂಡೆವು. ಆದರೆ ಎರಡನೇ ದಿನ ಅದೃಷ್ಟ ಭರತನಿಗೆ ಒಲಿಯಿತು. ಅದನ್ನು ಅದೃಷ್ಟ ಎನ್ನಲೇ! ಅಥವಾ ದುರ್ವಿಧಿ ಎನ್ನಲೇ! ಅವನು ನಿಮ್ಮ ಚಿತ್ರವನ್ನು ಜೋಬಿನಲ್ಲಿಟ್ಟುಕೊಂಡಿದ್ದ. "ನನ್ನ ಗುಡ್ ಲಕ್ ಚಾರ್ಮ್ ಎಂದು ಜೂಜಾಟದ ಮೇಜಿನ ಮುಂದೆ ಕುಳಿತ. ಆಟ ನೋಡಲು ನಾನೂ ಕುಳಿತಿದ್ದೆ. ಒಟ್ಟು ಹದಿನಾರು ಸಾವಿರ ಡಾಲರ್ ಬಾಚಿಕೊಂಡ! ಒಂದೇ ಗಂಟೆಯಲ್ಲಿ. "ಇನ್ನು ಸಾಕು, ನನ್ನ ಗುಡ್ ಲಕ್ ಚಾರ್ಮನ್ನು ಇನ್ನು ಪರೀಕ್ಷಿಸುವುದು ಬೇಡ!" ಎಂದು ಮೇಲೆದ್ದು ಮೇಜಿನ ಮೇಲಿದ್ದ ಚಿಪ್ಸ್ ಬಾಚಿಕೊಂಡು ಅವನ್ನು ಕ್ಯಾಷಿಯರ್ ಹತ್ರಿರ ಕೊಟ್ಟು ನಗದು ಹಣ ಪಡೆದುಕೊಂಡ. ಖುಷಿಯಲ್ಲೇ ನಾವು ಹೊರಗೆ ಬಂದೆವು.
ನಾವು ತಂಗಿದ ಹೋಟೆಲ್ ಅಲ್ಲಿಂದ ಸ್ವಲ್ಪ ದೂರದಲ್ಲಿತ್ತು. ನಾವು ನಡೆದುಕೊಂಡೇ ಹೊರಟೆವು. ರಾತ್ರಿಯ ಹನ್ನೆರಡು ಮೀರಿತ್ತು. ಒಂದು ಸಣ್ಣ ರಸ್ತೆಯಲ್ಲಿ ಹೋಗುವಾಗ ಯಾರೋ ಹಿಂಬಾಲಿಸಿ ಬರುತ್ತಿದ್ದಾರೆ ಎನ್ನಿಸಿತು. ಭರತ್ ಹಿಂದೆ ತಿರುಗಿ ನೋಡಿದ. ಇಬ್ಬರು ಧಾಂಡಿಗರು ನಮ್ಮ ಕಡೆಗೇ ಬರುತ್ತಿದ್ದರು. ಓಡು ಎಂದು ಭರತ್ ತಾನೂ ಓಡಲು ಪ್ರಾರಂಭಿಸಿದ. ಆದರೆ ಅವನ ಅದೃಷ್ಟ ಆ ಹೊತ್ತಿನಲ್ಲಿ ಅವನನ್ನು ತ್ಯಜಿಸಿತು. ನಾನು ಓಡಿದೆ. ಅವನೂ ಹಿಂದೆ ಓಡುತ್ತಿದ್ದ. ಒಮ್ಮೆಲೇ ಗುಂಡಿನ ಸದ್ದಾಯಿತು. ಭರತ್ ಕೆಳಗುರುಳಿದ. ನಾನು ಕಂಗೆಟ್ಟು ಅಲ್ಲೇ ಅಡಗಿಕೊಂಡೆ. ಧಾಂಡಿಗರು ಅವನ ಸಮೀಪ ಬಂದು ಅವನ ಹಣವನ್ನು ಕಸಿದುಕೊಂಡು ಹೊರಟೇ ಹೋದರು. ನಾನು ಅವನನ್ನು ಸಮೀಪಿಸಿದೆ. ಆವನಿನ್ನೂ ಉಸಿರಾಡುತ್ತಿದ್ದ. ನನ್ನ ಕಡೆ ನೋಡಿದ. ನಾನು 911 ಕರೆ ಮಾಡಿದೆ. ಅವನು ಶಾಂತನಾಗೇ ಇದ್ದ. ತನ್ನ ಜೋಬಿನಿಂದ ತೆಗೆದು "ನನ್ನ ಗುಡ್ ಲಕ್ ಚಾರ್ಮ್ ಈಗ ನಿನ್ನದು" ಎಂದ. "ನೀನು ಮಹಿಮಾಳನ್ನು ಸಂಪರ್ಕಿಸಿ ಎಲ್ಲವನ್ನೂ ಹೇಳು ಅವಳು ನಿನ್ನ ಜವಾಬ್ದಾರಿ" ಎಂದ. ಆಂಬ್ಯುಲೆನ್ಸ್ ಬರುವ ಮುನ್ನವೇ ಅವನು ಕಣ್ಣು ಮುಚ್ಚಿದ.
ಅವನ ಶವದೊಂದಿಗೆ ನಾನು ಸುಮಾರು ಹನ್ನೆರಡು ಗಂಟೆ ಕಳೆದೆ. ಅದನ್ನು ಪ್ಲೇನ್ ಮೂಲಕ ಬಾಂಬೆಗೆ ಕಳಿಸಿದ್ದು ನಾನೇ. ಇದೆಲ್ಲಾ ಆಗಿ ವಿಶ್ವವಿದ್ಯಾಲಯಕ್ಕೆ ಮರಳಿದಾಗ ನನಗೆ ಓದಲು ಸಾಧ್ಯವೇ ಆಗಲಿಲ್ಲ. ಕೊನೆಗೆ ಇಲಿನಾಯ್ ವಿಶ್ವವಿದ್ಯಾಲಯಕ್ಕೆ ಸ್ಥಳಾಂತರಿಸಿಕೊಂಡು ಅಲ್ಲಿ ಪಿಎಚ್.ಡಿ. ಮುಂದುವರೆಸಿದೆ. ನಿಮ್ಮನ್ನು ಸಂಪರ್ಕಿಸಲು ಭರತ್ ಹೇಳಿದ್ದರೂ ನನಗೆ ಧೈರ್ಯವಾಗಲಿಲ್ಲ. ಅವನ ತಂದೆ ತಾಯಿಗೆ ವಿಷಯ ತಿಳಿಸಿದಾಗ ಅವರಿಗೆ ಉಂಟಾದ ಆಘಾತವನ್ನು ನಾನು ಹೇಗೆ ಮರೆಯಲಿ! ಅವರಿಗೆ ಸಂದೇಶ ಕಳಿಸಿ ನಿಮಗೂ ತಿಳಿಸುವಂತೆ ವಿನಂತಿಸಿಕೊಂಡೆ.
ಪತ್ರವನ್ನು ಓದುತ್ತಾ ಮಹಿಮಾ ದಂಗಾಗಿ ಕುಳಿತಿದ್ದಳು.

* * *

ಮಂಚದ ಪಕ್ಕದಲ್ಲಿದ್ದ ಮೇಜಿನ ಮೇಲಿದ್ದ ಹೂಜಿಯಿಂದ ಮಹಿಮಾ ಒಂದು ಲೋಟ ನೀರು ಬಗ್ಗಿಸಿಕೊಂಡು ಕುಡಿದಳು. ಕಣ್ಣುಗಳು ಮತ್ತೊಮ್ಮೆ ಸುನಿಲ್ ರಾವ್ ಕಳಿಸಿದ ಸಂದೇಶವನ್ನು ಓದತೊಡಗಿದವು.

ಮಹಿಮಾ, ನಾನು ಇಲಿನಾಯ್ ಯೂನಿವರ್ಸಿಟಿಯಲ್ಲಿ ಸಂಶೋಧನೆಗೆ ಹೋಗಿದ್ದು ಭರತನನ್ನು ಮರೆಯಲೆಂದೇ. ನಮ್ಮ ಜೀವನದಲ್ಲಿ ನಡೆದ ಕರಾಳ ಘಟನೆಯನ್ನು ಮರೆಯಲೆಂದೇ. ಹೀಗಾಗಿ ನಾನು ಸಂಶೋಧನೆಯಲ್ಲಿ ಸಂಪೂರ್ಣ ಮುಳುಗಿದೆ. ಮಲಗಲು ಮಾತ್ರ ನಾನು ನನ್ನ ಅಪಾರ್ಟ್ಮೆಂಟಿಗೆ ಹೋಗುತ್ತಿದ್ದೆ. ಬೆಳಗ್ಗೆ ಎಂಟು ಗಂಟೆಗೆಲ್ಲ ಪ್ರಯೋಗಶಾಲೆಗೆ ಬರುತ್ತಿದ್ದೆ. ರಾತ್ರಿ ಹನ್ನೆರಡು ಗಂಟೆಗೆ ಹೊರಡುತ್ತಿದ್ದೆ. ನನಗೆ ಲ್ಯಾಬ್ ಪಿಶಾಚಿ ಎಂದೇ ಹೆಸರು ಕೊಟ್ಟಿದ್ದರು.
ಕೊನೆಗೂ ನನ್ನ ಪಿಎಚ್.ಡಿ. ಮುಗಿಸಿದೆ. ಇಷ್ಟು ದಿನ ನಾನು ಮರೆಯಲು ಪ್ರಯತ್ನಿಸಿದ ವಿಷಯ ನಾನು ಮರೆತೇ ಇರಲಿಲ್ಲವೆಂದು ನನಗೆ ಮನದಟ್ಟಾಯಿತು. ನಾನು ಭಾರತಕ್ಕೆ ಮರಳುವ ನಿರ್ಧಾರ ತೆಗೆದುಕೊಂಡೆ. ಬೆಂಗಳೂರಿನ ಕಾಲೇಜಿನಲ್ಲಿ ನೀವು ಲೈಬ್ರರಿಯನ್ ಆಗಿದ್ದೀರಿ ಎಂದು ಭರತ್ ಹೇಳಿದ್ದ. ಇಂದಿನ ಇಂಟರ್ನೆಟ್ ಯುಗದಲ್ಲಿ ನಿಮ್ಮ ಕಾಲೇಜ್ ವಿಳಾಸ ಹುಡುಕುವುದು ಕಷ್ಟವಾಗಲಿಲ್ಲ. ಕಾಲೇಜಿನಲ್ಲಿ ನೌಕರಿ ಸಿಕ್ಕುವುದೂ ಕಷ್ಟವಾಗಲಿಲ್ಲ. ಇಷ್ಟೊಂದು ಸಂಶೋಧನೆ ಮಾಡಿದ ನಂತರ ನಾನೇಕೆ ಸೈನ್ಸ್ ಪಾಠ ಹೇಳುವ ಕೆಲಸಕ್ಕೆ ಸೇರುತ್ತಿದ್ದೇನೆ ಎಂದು ಆಡಳಿತ ಮಂಡಳಿಯವರೇ ಕೇಳಿದರು!

ನಾನು ನಿಮ್ಮನ್ನು ಮೊದಲು ಕಂಡ ದಿವಸ ನಿಮಗೆ ಮರೆತುಹೋಗಿರಬಹುದು. ಅವತ್ತು ಮಳೆ ಬರುತ್ತಿತ್ತು. ನೀವು ನಿಮ್ಮ ಮೇಜಿನ ಮೇಲೆ ಕುಳಿತು ಹೊರಗೆ ಮಳೆ ಬೀಳುವುದನ್ನೇ ನೋಡುತ್ತಾ ಕುಳಿತಿದ್ದಿರಿ. ಬಹುಶಃ ನಿಮ್ಮೊಳಗಿರುವ ಕಲಾವಿದೆಗೆ ಅಲ್ಲಿ ಏನೋ ಅದ್ಭುತ ದೃಶ್ಯ ಕಂಡಿರಬಹುದು. ನನಗಂತೂ ಒಂದು ಅದ್ಭುತ ದೃಶ್ಯ ಕಂಡಿತು. ನಾನು ಕಲಾವಿದನಲ್ಲದಿದ್ದರೂ! ಅಂದು ನಾನು ನಿಮ್ಮೊಂದಿಗೆ ಮಾತಾಡದೇ ಸ್ವಲ್ಪ ಹೊತ್ತು ಲೈಬ್ರರಿಯಲ್ಲಿ ಕಳೆದು ವಾಪಸ್ ಬಂದುಬಿಟ್ಟೆ. ನಿಮ್ಮ ಕೊರಳಲ್ಲಿ ಮಾಂಗಲ್ಯ ಕಾಣಲಿಲ್ಲ.
ನಿಮ್ಮ ಬಗ್ಗೆ ಯಾರನ್ನೂ ಕೇಳುವಹಾಗೂ ಇರಲಿಲ್ಲ. ಒಬ್ಬ ಪ್ರೊಫೆಸರ್ ಒಬ್ಬ ಲೈಬ್ರರಿಯನ್ ಮದುವೆ ವಿಷಯ ಇನ್ನೊಬ್ಬರನ್ನು ಕೇಳಿದರೆ ಅದಕ್ಕೆ ಇನ್ನೇನು ಅರ್ಥ ಕಲ್ಪಿಸುತ್ತಾರೋ! ನೀವು ಪ್ರತಿದಿನ ಮನೆಗೆ ಹೋಗುವಾಗ ತಡವಾಗಿ ಹೋಗುವುದನನ್ನು ಗಮನಿಸಿದೆ. ಒಮ್ಮೆ ನಿಮ್ಮನ್ನು ಹಿಂಬಾಲಿಸಿದೆ ಕೂಡಾ! ಒಂದು ಭಾನುವಾರ ಲೈಬ್ರರಿ ಮುಚ್ಚಿದ ದಿವಸ ನನಗೆ ಯಾವುದೋ ಪುಸ್ತಕ ಬೇಕೆಂದು ಆಡಳಿತ ಮಂಡಳಿಯಿಂದ ನಿಮ್ಮ ವಿಳಾಸ ಪಡೆದುಕೊಂಡು ನಿಮ್ಮ ಮನೆಗೇ ಬಂಡೆಮ್ ನಿಮ್ಮ ತಂದೆ ತಾಯಿಯ ಜೊತೆ ನೀವು ವಾಸಿಸುತ್ತೀರಿ ಎಂದು ಗೊತ್ತಾಯಿತು. ನೀವು ಇನ್ನೂ ಅವಿವಾಹಿತೆಯಾಗಿಯೇ ಉಳಿದಿದ್ದೀರಿ ಎಂದು ಖಾತ್ರಿಯಾಯಿತು. ಒಮ್ಮೆ ಬೇಕೆಂದೇ ನಿಮ್ಮ ಜೊತೆ ಮಾತಾಡುವಾಗ ನಿಮ್ಮ ಮಕ್ಕಳ ವಿಷಯ ಮಾತಾಡಿದಾಗ ನೀವು ನನ್ನಕಡೆ ನೋಡಿ ನಗುತ್ತಾ "ನನಗೆ ಇನ್ನೂ ಮದುವೆಯೇ ಆಗಿಲ್ಲ" ಎಂದಿರಿ. ಇದರಿಂದ ನನಗೆ ಏಕಕಾಲದಲ್ಲಿ ದುಃಖ ಮತ್ತು ಸಮಾಧಾನ ಎರಡೂ ಉಂಟಾದವು. ಭರತನಲ್ಲಿ ನೀವಿಟ್ಟ ವಿಶ್ವಾಸವನ್ನು ಕಂಡು ಅಭಿಮಾನ ಉಂಟಾಯಿತು. ಅವನ ನೆನಪಿನಲ್ಲಿ ನೀವು ಒಂಟಿಯಾಗಿರುವುದು ನನಗೆ ನೋವುಂಟುಮಾಡಿತು. ಸಮಾಜವನ್ನು ನೀವು ಅದು ಹೇಗೆ ಎದುರಿಸುತ್ತಿರಬಹುದು ಎಂದು ಆಶ್ಚರ್ಯವೂ ಆಯಿತು. ಆದರೆ ಅದೆಲ್ಲಕ್ಕಿಂತ ಹೆಚ್ಚಾಗಿ ಏನೋ ಸಮಾಧಾನ ಮನಸ್ಸನ್ನು ತುಂಬಿತು. ಭರತ್ ನನಗೆ ಒಪ್ಪಿಸಿದ ಕರ್ತವ್ಯವನ್ನು ನಿಭಾಯಿಸಲು ನನಗೆ ಅವಕಾಶ ಸಿಕ್ಕಿತೆಂಬ ಕಾರಣವೇ? ಅಥವಾ ನಿಮ್ಮಲ್ಲಿ ನಾನು ನಿಜವಾಗಲೂ ಅನುರಕ್ತನಾಗುತ್ತಿದ್ದೆನೆ? ಈಗ ನನಗೆ ಇದರ ಉತ್ತರ ಸಿಕ್ಕಿದೆ.

ನಿಮ್ಮ ಒಂಟಿಜೀವನವನ್ನು ಕಳೆದ ಒಂದು ವರ್ಷದಿಂದ ನೋಡುತ್ತಾ ನಾನೂ ಅದೇ ಒಂಟಿತನವನ್ನು ಅನುಭವಿಸಿದ್ದೇನೆ. ನಮ್ಮಿಬ್ಬರಡೂ ಸಮಾನದುಃಖ. ಭರತನನ್ನು ನಾವಿಬ್ಬರೂ ಬೇರೆ ಬೇರೆ ರೀತಿಯಲ್ಲಿ ಆರಾಧಿಸಿದೆವು. ಅವನು ನಮ್ಮಿಬ್ಬರಿಗೂ ವ್ಯಾಲೆಂಟೈನ್. ನೆನ್ನೆ ಹೇಗೋ ಧೈರ್ಯ ಮಾಡಿ ನಿಮಗೊಂದು ವ್ಯಾಲೆಂಟೈನ್ ಕಾರ್ಡ್ ಕೊಡುವ ಸಾಹಸ ಮಾಡಿದೆ. ನಿಮ್ಮೊಂದಿಗೆ ಇನ್ನಷ್ಟು ಮಾತಾಡಲು ಪ್ರಾಕ್ಟಿಸ್ ಮಾಡಿಕೊಂಡು ಬಂದಿದ್ದೆಮ್ ಆದರೆ ಅಷ್ಟರಲ್ಲಿ ರೆಫರೆನ್ಸ್ ಪುಸ್ತಕವನ್ನು ಚೆಕೌಟ್ ಮಾಡಲು ಬಂದ ಹುಡುಗ ನನಗೆ ಅವಕಾಶವನ್ನು ತಪ್ಪಿಸಿಬಿಟ್ಟ.

ನೀವು ಆ ಹುಡುಗನಿಗೆ ಪುಸ್ತಕ ಕೊಡಲು ನಿರಾಕರಿಸಿ "ನಾಟ್ ಫಾರ್ ಸರ್ಕ್ಯುಲೇಷನ್" ಎಂದು ರಬ್ಬರ್ ಸ್ಟಾಂಪ್ ಹಾಕಿಬಿಟ್ಟಿರಲ್ಲ, ಹಾಗೇ ನನ್ನನ್ನೂ ನಿರಾಕರಿಸಿ "ನಾಟ್ ಫಾರ್ ಸರ್ಕ್ಯುಲೇಷನ್" ಎಂದು ಬಿಡುತ್ತೀರೇನೋ ಎಂದು ಅಳುಕಿದೆ. ನಾಳೆ ಬೆಳಗ್ಗೆವರೆಗೂ ನಿಮ್ಮ ನಿರ್ಧಾರ ತಿಳಿಸಿ ಎಂದು ಹೇಳಿದ್ದರೂ ನನಗೇಕೋ ತಡೆಯಲು ಸಾಧ್ಯವಾಗುತ್ತಿಲ್ಲ. ನಿಮ್ಮನ್ನು ಭೇಟಿಯಾಗಲು ಹೃದಯ ಕಾತರಿಸುತ್ತಿದೆ. ಭರತ್ ನನಗೆ ಅಲ್ಲಿಂದಲೇ ಮುಂದೆ ಹೆಜ್ಜೆಯಿಡು ಎಂದು ಹೇಳುತ್ತಿದ್ದಾನೆ. ಈ ಪತ್ರ ಓದಿದ ನಂತರ ನಿಮ್ಮ ಕಿಟಕಿಯಿಂದ ಹೊರಗೆ ಇಣುಕಿ."

ಮಹಿಮಾ ಒಂದು ನಿಮಿಷ ತಬ್ಬಿಬ್ಬಾದಳು. ಸುನಿಲ್ ಇಲ್ಲಿಗೇ ಬಂದನೆ! ಅವಳು ಧಡಕ್ಕನೆ ಮೇಲೆದ್ದಳು. ಮೇಜಿನ ಮೇಲಿದ್ದ ವಸ್ತುವೊಂದು ಕೆಳಗೆ ಜಾರಿಬಿತ್ತು. ಅವಳು ಕೆಳಗೆ ಬಗ್ಗಿ ನೋಡಿದಳು. ಭರತ್ ಕಳಿಸಿದ ಉಡುಗೊರೆ. ಅದನ್ನು ಮೆಲ್ಲನೆ ಕೈಗೆತ್ತಿಕೊಂಡು ನೋಡಿದಳು. ಗಡಿಯಾರ ನಿಂತುಹೋಗಿತ್ತು. ಆದರೆ ಅವಳಿಗೆ ಗೊತ್ತು. ಬ್ಯಾಟರಿ ಬದಲಾಯಿಸಿದರೆ ಮತ್ತೆ ಚೈತನ್ಯ ತುಂಬಿಕೊಂಡು ಗಡಿಯಾರದ ಮುಳ್ಳುಗಳು ಚಲಿಸುತ್ತವೆ. ಸ್ಥಬ್ಧವಾಗಿ ನಿಂತಿದ್ದ ಕಾಲ ಮತ್ತೆ ಮುಂದಕ್ಕೆ ಓಡುತ್ತದೆ.

ಯೋಚಿಸುತ್ತಾ ನಿಂತವಳನ್ನು ಮೊಬೈಲ್ ಸಂದೇಶದ ಸದ್ದು ಎಚ್ಚರಿಸಿತು. ಹೌಹಾರಿ ಮೊಬೈಲ್ ಎತ್ತಿಕೊಂಡು ನೋಡಿದಳು. ಸುನಿಲ್ ರಾವ್!
"ಮಹಿಮಾ ನಮ್ಮಿಬ್ಬರ ನಡುವೆ ಏನಾದರೂ ಕೆಮಿಸ್ಟ್ರಿ ಇದೆಯೋ ಇಲ್ಲವೋ? ರಿಯಾಕ್ಷನ್ ಗಾಗಿ ಕಾಯುತ್ತಿದ್ದೇನೆ" "ಎಂಬ ತುಂಟ ಸಂದೇಶ ಅವಳ ಮುಖದ ಮೇಲೆ ಮಂದಹಾಸ ತಂದಿತು. ಓಡಿ ಹೋಗಿ ಕಿಟಕಿಯ ಬಾಗಿಲು ತೆರೆದಳು. ಗೇಟಿನ ಹೊರಗೆ ಒಂದು ಗುಲಾಬಿಯನ್ನು ಹಿಡಿದು ಸುನಿಲ್ ನಗುತ್ತಾ ನಿಂತಿದ್ದ.

(c) ಸಿ. ಪಿ. ರವಿಕುಮಾರ್ 

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)