ದ ಮರ್ಡರ್ ಆಫ್ ಮೇರಿ ಫೇಗನ್ - ಒಂದು ರಾಜಕೀಯ ಚಲಚ್ಚಿತ್ರ

ಈಚೆಗೆ ನೋಡಿದ "ದ ಮರ್ಡರ್ ಆಫ್ ಮೇರಿ ಫೇಗನ್" ಎಂಬ ಚಿತ್ರದ ಬಗ್ಗೆ ಬರೆಯಬೇಕು ಎನ್ನಿಸಿತು. ಮೂರು ಗಂಟೆಗೂ ಹೆಚ್ಚು ಅವಧಿಯ ಈ ಚಿತ್ರ ವಾಸ್ತವವಾಗಿ  ಟೆಲಿವಿಷನ್ ತೆರೆಗಾಗಿ ತಯಾರಿಸಲಾದ ಮಿನಿ ಸೀರೀಸ್.  ನಿಮಗೂ ಇದು ಅಂತರ್ಜಾಲದಲ್ಲಿ ಸಿಕ್ಕುತ್ತದೆ.  ಇದೊಂದು ಸತ್ಯ ಘಟನೆಯನ್ನು ಆಧರಿಸಿದ ಚಿತ್ರ.

ಇಪ್ಪತ್ತನೇ ಶತಮಾನದ ಪ್ರಾರಂಭದಲ್ಲಿ ಅಮೆರಿಕಾದ ಜಾರ್ಜಿಯಾ ರಾಜ್ಯದಲ್ಲಿ ಒಂದು ಪೆನ್ಸಿಲ್ ಫ್ಯಾಕ್ಟರಿಯಲ್ಲಿ ಮೇರಿ ಫೇಗನ್ ಎಂಬ  ಹದಿಮೂರು ವರ್ಷದ ಒಬ್ಬ ಕಾರ್ಮಿಕ ಬಾಲಕಿಯ ಕೊಲೆಯಾಗುತ್ತದೆ. ಮ್ಯಾನೇಜರ್ ಆಗಿದ್ದ ಲಿಯೋ ಫ್ರಾಂಕ್ ಎಂಬ  ವ್ಯಕ್ತಿಯ ಮೇಲೆ ಕೊಲೆಯ ಆರೋಪ ಮಾಡಲಾಗುತ್ತದೆ. ಅವನೊಬ್ಬ ಯಹೂದಿ ಎಂಬ ಕಾರಣಕ್ಕಾಗಿ ಜಾರ್ಜಿಯಾದ ಜನರಿಗೆ ಅವನ ಮೇಲೆ ಅಸಹನೆ. ರಾಜಕಾರಣಿಗಳು, ಪೊಲೀಸರು, ಪ್ರಾಸೆಕ್ಯೂಟರ್ ಎಲ್ಲರೂ ಅವನ ವಿರುದ್ಧ ನಿಲ್ಲುತ್ತಾರೆ. ಪತ್ರಿಕಾ ವರದಿಗಾರರು ಅವನನ್ನು ಒಬ್ಬ ರಾಕ್ಷಸನೆಂಬಂತೆ ಚಿತ್ರಿಸುತ್ತಾರೆ.  ಡಿಫೆನ್ಸ್ ಲಾಯರ್ ಸಾಕ್ಷ್ಯಗಳನ್ನು ಲೇವಡಿ ಮಾಡಲಾಗುತ್ತದೆ. ಅವರು ಸಾಕ್ಷ್ಯ ಹೇಳಲು ಬಂದಾಗ ಜನ ಎದ್ದು ನಿಂತು ಪ್ರಾರ್ಥನೆ ಹೇಳುತ್ತ ಅವರ ಮಾತು ಕೇಳದಂತೆ ಮಾಡುತ್ತಾರೆ. ಅತ್ಯಂತ ಮೃದು ಸ್ವಭಾವದ ಮ್ಯಾನೇಜರನನ್ನು ಪ್ರೀತಿಸಿ ಮದುವೆಯಾದ ಅವನ ಹೆಂಡತಿಯೂ ತನ್ನ ಪತಿಗೆ ಮತ್ತೊಂದು ಮುಖವಿರಬಹುದೇ ಎಂಬ ಸಂಶಕ್ಕೆ ಒಳಗಾದರೂ ಕೊನೆಗೆ ಅವಳ ಪ್ರೇಮವು ಗೆಲ್ಲುತ್ತದೆ. ಪತಿಯ ಬಗ್ಗೆ ಆರೋಪಗಳನ್ನು ಮಾಡಿ ಬರೆದ ರಿಪೋರ್ಟರನಿಗೆ ಅವಳು "ಅಲ್ಲಿ ಕೋರ್ಟ್ ಕಟಕಟೆಯಲ್ಲಿ ನಿಂತವನು ಯಾರೋ ನನಗೆ ಗೊತ್ತಿಲ್ಲ, ಅವನು ನಿಮ್ಮ ಸೃಷ್ಟಿ" ಎನ್ನುತ್ತಾಳೆ. ಜೂರಿಗಳು ಮ್ಯಾನೇಜರ್ ಅಪರಾಧಿ ಎಂದು ಘೋಷಿಸುತ್ತಾರೆ. ಅವನಿಗೆ ಗಲ್ಲು ಶಿಕ್ಷೆ ವಿಧಿಸಲಾಗುತ್ತದೆ.

ಜಾರ್ಜಿಯಾ ರಾಜ್ಯದಿಂದ ಸೆನೆಟರ್ ಆಗುವ ಆಕಾಂಕ್ಷೆ ಹಿಂದಿದ್ದ ಜಾನ್ ಸ್ಲೇಟನ್  ಎಂಬಾತನಿಗೆ ಈ ಕೇಸಿನಲ್ಲಿ ಮಧ್ಯಸ್ಥಿಕೆ ವಹಿಸಬೇಕಾಗುತ್ತದೆ.
ಜಾರ್ಜಿಯಾದ ಗವರ್ನರ್ ಜಾನ್ ಒಬ್ಬ ಆತ್ಮಸಾಕ್ಷಿಯುಳ್ಳ ವ್ಯಕ್ತಿ. ಜೂರಿಯು ಅಪರಾಧಿಯೆಂದು ನಿರ್ಧಾರ ಪ್ರಕಟಿಸಿದರೂ ನಿಜವಾಗಿ ನಡೆದದ್ದು ಏನು ಎಂಬ ತನಿಖೆ ಮುಂದುವರೆಸಲು ಅವನು ನಿರ್ಧರಿಸುತ್ತಾನೆ. ಏಕೆಂದರೆ ಪ್ರಾಸೆಕ್ಯೂಟರನ ಸಾಕ್ಷ್ಯಗಳಲ್ಲಿ ಹಲವಾರು ಜನರ ಹೇಳಿಕೆಗಳು ಅಸಂಬದ್ಧವಾಗಿರುತ್ತವೆ. ಒಬ್ಬಳು ಯುವತಿಗೆ ಪತ್ರಿಕೆಯಲ್ಲಿ ತನ್ನ ಚಿತ್ರ ಬರುತ್ತದೆಂಬ ಕಾರಣಕ್ಕಾಗಿ ಏನು ಬೇಕಾದರೂ ಹೇಳುವ ಉತ್ಸುಕತೆ. ಕಾರ್ಖಾನೆಯ ವಾಚ್ಮನ್ ಒಬ್ಬ ಕಪ್ಪು ಅಮೆರಿಕನ್ ವ್ಯಕ್ತಿ. (ಆಗ ಅವರನ್ನು ನೀಗ್ರೋ ಎನ್ನಲಾಗುತ್ತಿತ್ತು.) ಅವನ ಹೇಳಿಕೆಯೂ ಬೇಜವಾಬ್ದಾರಿಯದಾಗಿರುತ್ತದೆ.  ಮ್ಯಾನೇಜರ್ಕಾ ಅನೇಕ ಸಲ ಹುಡುಗಿಯರನ್ನು ತನ್ನ ಕೋಣೆಗೆ ಕರೆದೊಯ್ಯುತ್ತಿದ್ದ, ಹುಡುಗಿಯನ್ನು ಕೊಲೆ ಮಾಡಿದ ನಂತರ ಅವಳನ್ನು ಕೆಳಗಿನ ನೆಲಮಾಳಿಗೆಗೆ ಕರೆದೊಯ್ಯಲು ಅವನು ತನ್ನ ಸಹಾಯ ಬೇಡಿದ ಎಂದು ನುಡಿಯುತ್ತಾನೆ. ಆದರೆ ಇದನ್ನೆಲ್ಲಾ ಹೇಳುವಾಗ ಅವನು 
ರ್ಖಾನೆಯಲ್ಲಿ ಕೆಲಸ ಮಾಡುವ ಒಬ್ಬ ಹುಡುಗ ಏನೋ ಮುಚ್ಚಿಡುತ್ತಿದ್ದಾನೆಂದು ತೋರುತ್ತದೆ. ಇಷ್ಟೆಲ್ಲಾ ಇದ್ದರೂ ಯಹೂದಿ ಎಂಬ ಅಸಹನೆಯ ಕಾರಣ ಜನ ಮತ್ತು ಜೂರಿ ಆರೋಪಿಯ ವಿರುಧ್ಧ ತಿರುಗಿಬಿದ್ದಿದ್ದಾರೆಂ ಅವರಿಗೆ ತಕ್ಷಣ ನ್ಯಾಯ ಬೇಕಾಗಿದೆ. ಮ್ಯಾನೇಜರನನ್ನು ನೇಣು ಹಾಕಲು ಅವರು ತುದಿಗಾಲಿನ ಮೇಲೆ ನಿಂತಿದ್ದಾರೆ.

John Marshall Slaton.jpg
(ಜಾರ್ಜಿಯಾದ ಗವರ್ನರ್ ಜಾನ್ ಸ್ಲೇಟನ್)

ಗವರ್ನರ್ ಜಾನ್ ಕೇಸನ್ನು ಮತ್ತೆ ಪರಿಶೀಲಿಸಲು ನಿರ್ಧರಿಸಿದಾಗ ಸಾಕಷ್ಟು ಜನ ಅವನ ಮೇಲೆ ಸಿಡಿಮಿಡಿಗೊಳ್ಳುತ್ತಾರೆ. ರಾಜಕೀಯದಲ್ಲಿ ಅವನ ಗುರುವಾಗಿದ್ದ ಒಬ್ಬ ಸೆನೆಟರ್ ಕೂಡಾ ಅವನನ್ನು ಬೈದು ನೀನು ರಾಜಕೀಯ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವೆ ಎಂದು ಎಚ್ಚರಿಸುತ್ತಾನೆ. ಗವರ್ನರ್ ಪತ್ನಿ ಮಾತ್ರ ಅವನನ್ನು ಬೆಂಬಲಿಸುತ್ತಾಳೆ. ಜಾನ್ ಅನೇಕ ಹೊಸ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಾನೆ. ಜೈಲಿನಲ್ಲಿರುವ ವಾಚ್ ಮನ್ ಅಪರಾಧ ಹಿನ್ನೆಲೆಯುಳ್ಳವನು ಎಂಬ ಅಂಶ ಗೊತ್ತಾಗುತ್ತದೆ. ಅವನು ಹಿಂದೆಯೂ ಕೋರ್ಟಿನಲ್ಲಿ ಸುಳ್ಳು ಹೇಳಿದ್ದನೆಂದು ತಿಳಿಯುತ್ತದೆ. ಕೊನೆಗೆ ಕಾರ್ಖಾನೆಗೆ ಹೋದಾಗ ಒಂದು ವಿಷಯವನ್ನು ಜಾನ್ ಗಮನಿಸುತ್ತಾನೆ. ವಾಚ್ಮನ್ ಕೋರ್ಟಿನಲ್ಲಿ "ಮ್ಯಾನೇಜರ್ ಹುಡುಗಿಯ ಶವವನ್ನು ಎಲಿವೇಟರಿನಲ್ಲಿ ತರಲು ತನ್ನ ಸಹಾಯ ಕೇಳಿದ" ಎಂದು ಸಾಕ್ಷ್ಯ ಹೇಳಿರುತ್ತಾನೆ. ಆಕೆಯ ಹ್ಯಾಟ್ ಮತ್ತು ಕೊಡೆಯನ್ನು ತಾನೇ ಕೆಳಗೆಸೆದೆ ಎಂದು ಹೇಳಿರುತ್ತಾನೆ. ಆದರೆ ಹಳೆಯ ಕಾಲದ ಲಿಫ್ಟ್‍‍ನಲ್ಲಿ  ಹಾಗೆ ಕೆಳಗೆಸೆದ ಕೊಡೆ ಲಿಫ್ಟ್ ತಳಕ್ಕೆ ಸಿಕ್ಕು ಮುರಿದು ಹೋಗಿರಬೇಕು! ಆದರೆ ಸಾಕ್ಷ್ಯ ಸಂಗ್ರಹದಲ್ಲಿದ್ದ ಕೊಡೆ ಸುಸ್ಥಿತಿಯಲ್ಲಿದೆ! ಎಲ್ಲರೊಂದಿಗೆ ವಾಚ್ಮನ್ ಜೊತೆಗೆ ಕಾರ್ಖಾನೆಗೆ ತೆರಳಿ ಈ ಅಂಶವನ್ನು ಗವರ್ನರ್ ಜಾನ್ ಬೆಳಕಿಗೆ ತಂದಾಗ ವಾಚ್ಮನ್ ಮೇಲೆ ಸಂಶಯ ಉಂಟಾಗುತ್ತದೆ. ಹುಡುಗಿಯನ್ನು ಅವನೇ ಕೊಲೆ ಮಾಡಿರಲು ಸಾಧ್ಯವಿದೆ ಎಂದು ಎಲ್ಲರಿಗೂ ಮನದಟ್ಟಾಗುತ್ತದೆ.
(ಲಿಯೋ ಫ್ರಾಂಕ್‍‍ನನ್ನು ಜನರ ಗುಂಪು ನೇಣು ಹಾಕಿದ ಚಿತ್ರ - ಬಲದಲ್ಲಿ ಹ್ಯಾಟ್ ತೊಟ್ಟು ನಿಂತವನು ಈ ಗುಂಪನ್ನು ಹುರಿಗೊಳಿಸಿದ ಮಾರಿಸ್ ಎಂಬ ನ್ಯಾಯಾಧೀಶ)

ಗವರ್ನರ್ ಜಾನ್ ಮ್ಯಾನೇಜರ್ ಲಿಯೋ ಫ್ರಾಂಕ್‍‍ಗೆ ದೊರೆತ ಗಲ್ಲು ಶಿಕ್ಷೆಯನ್ನು ಜೀವಾವಧಿ ಸೆರೆವಾಸಕ್ಕೆ ಬದಲಾಯಿಸುತ್ತಾನೆ. ಅವನ ಹೇಳಿಕೆ ಹೀಗಿರುತ್ತದೆ: ನನ್ನ ಬಗ್ಗೆ ಜನ ಹೀನಾಯವಾಗಿ ಮಾತಾಡಿಕೊಳ್ಳಬಹುದು, ಬೈಯಬಹುದು, ನನ್ನನ್ನು ಮೂಲೆಗುಂಪು ಮಾಡಬಹುದು. ಇವೆಲ್ಲವೂ ನನಗೆ ಒಪ್ಪಿಗೆ. ಆದರೆ ನನ್ನನ್ನು ಸದಾ ಚುಚ್ಚುತ್ತಿರುವ ಆತ್ಮಸಾಕ್ಷಿಯ ದಾಳಿಯನ್ನು ನಾನು ತದೆದುಕೊಳ್ಳಲಾರೆ. ನಾನು ಜಾರ್ಜಿಯಾ ರಾಜ್ಯದ ಗವರ್ನರ್ ಆದರೂ ನನಗೆ ಯಾವುದು ಸರಿ ಎನ್ನಿಸುತ್ತದೋ ಅದನ್ನು ಮಾಡಲು ಅಸಮರ್ಥನಾದೆ ಎಂದು ನನ್ನ ಆತ್ಮಸಾಕ್ಷಿಯು ನನ್ನನ್ನು ಹೀಯಾಳಿಸುವುದನ್ನು ನಾನು ಸಹಿಸಲಾರೆ. ನನ್ನ ನಿರ್ಧಾರದ ಕಾರಣ ನಾನು ಇನ್ನು ಮುಂದೆ ಅನಾಮಧೇಯನಂತೆ ಎಲ್ಲೋ ಹೊಲ ಉಳುತ್ತಾ  ಬದುಕಬೇಕಾಗಬಹುದು. ಆದರೆ ನನ್ನ ಕೈಗಳ ಮೇಲೆ ನೆತ್ತರು ಇರುವುದರ ಬದಲು  ನೇಗಿಲಿನ ಗುರುತು ಎಷ್ಟೋ ಮೇಲು." 

ಮ್ಯಾನೇಜರನನ್ನು ಗವರ್ನರ್ ಜಾನ್ ಗುಟ್ಟಾಗಿ ಬೇರೊಂದು ಜೈಲಿಗೆ ವರ್ಗಾವಣೆ ಮಾಡುತ್ತಾನೆ. ಅಷ್ಟರಲ್ಲಿ ಜನರ ಸೈರಣೆ ತಪ್ಪುತ್ತದೆ. ಗುಂಪೊಂದು ಮ್ಯಾನೇಜರನನ್ನು ಜೈಲಿನಿಂದ ಕಿಡ್ನಾಪ್ ಮಾಡಿ ತಾನೇ ಅವನಿಗೆ ನೇಣು ಶಿಕ್ಷೆ ವಿಧಿಸಿಬಿಡುತ್ತದೆ. ಜಾನ್ ಮೇಲೂ ಹಲ್ಲೆಯ ಯತ್ನ ನಡೆಯುತ್ತದೆ. ಜಾನ್ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ನಡೆಯುತ್ತಾನೆ. ಸೆನೆಟರ್ ಆಗುವ ಅವನ ಕನಸು ನುಚ್ಚುನೂರಾಗುತ್ತದೆ.

ಇದಾದ ನಂತರ ವಿಚಿತ್ರ ಬದಲಾವಣೆಗಳು ಉಂಟಾಗುತ್ತವೆ. ಪ್ರಾಸೆಕ್ಯೂಟರ್ ಲಾಯರಾಗಿದ್ದ ಡಾರ್ಸಿ ಈಗ ಗವರ್ನರ್ ಪದವಿಗೆ ಏರುತ್ತಾನೆ. ಮ್ಯಾನೇಜರನಿಗೆ ಶಿಕ್ಷೆ ವಿಧಿಸಿದ ಗುಂಪಿನ ವಿರುದ್ಧ ಯಾವುದೇ ಕ್ರಮ ಜರುಗುವುದಿಲ್ಲ. ವಾಚ್ಮನ್ ಒಂದು ವರ್ಷದ ನಂತರ ಜೈಲಿನಿಂದ ಹೊರಬರುತ್ತಾನೆ.

ಸಾಕ್ಷಿ ಹೇಳಲು ಹೆದರಿದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಹುಡುಗ ಎಂಬತ್ತು ವರ್ಷದ ವೃದ್ಧನಾದಾಗ ಕೊನೆಗೂ ವಾಚ್ಮನ್ ಕೊಲೆ ಮಾಡುವುದನ್ನು ತಾನು ನೋಡಿದೆನೆಂದು ಸಾಕ್ಷ್ಯ ಹೇಳುತ್ತಾನೆ. ಮರಣದ ಅನೇಕ ದಶಕಗಳ ತರುವಾಯ ಮ್ಯಾನೇಜರನಿಗೆ ನ್ಯಾಯ ದೊರೆಯುತ್ತದೆ.

ಬಹಳ ಗಂಭೀರ ನಡಿಗೆಯ ಚಿತ್ರವನ್ನು ನಿರ್ದೇಶಕ ವಿಲಿಯಂ ಹೇಲ್ ತುಂಬಾ ಚೆನ್ನಾಗಿ ನಿಭಾಯಿಸಿದ್ದಾನೆ.ಜಾನ್ ಸ್ಲೇಟನ್ ಪಾತ್ರದಲ್ಲಿ ಜಾಕ್ ಲೆಮನ್ ಅಭಿನಯ ಮನಃಸ್ಪರ್ಶಿಯಾಗಿದೆ. 

ಜಗತ್ತಿಗೇ ಬುದ್ಧಿವಾದ ಹೇಳುವ ಅಮೆರಿಕಾದಲ್ಲಿ ಇದು ನೂರು ವರ್ಷಗಳ ಹಿಂದೆ ನಡೆದ ಕಥೆ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)