ಕಲ್ಲು

ಸಣ್ಣಕತೆ - ಸಿ. ಪಿ. ರವಿಕುಮಾರ್ 
(ಅಮೆರಿಕಾದ ಕೆಂಟಕಿ ರಾಜ್ಯದಲ್ಲಿ ಅಕ್ಟೋಬರ್ 6, 2018 ನಡೆದ ನಿಜಘಟನೆಯನ್ನು ಆಧರಿಸಿದ್ದು. ಪಾತ್ರಗಳು ಕಾಲ್ಪನಿಕ.)
Image result for door stopper meteorite

ಜಿಮ್ ಬಾಗಿಲು ತೆರೆದು ಒಳಗೆ ಬಂದಾಗ ಸ್ಟೆಲ್ಲಾ ಟೆಲಿವಿಷನ್ ನೋಡುತ್ತಾ ರಾತ್ರಿಯ ಅಡುಗೆಗೆಂದು ಹುರುಳಿಕಾಯಿಯನ್ನು ಕತ್ತರಿಯಿಂದ ಕತ್ತರಿಸುತ್ತಾ ಕೂತಿದ್ದಳು.

"ಮಕ್ಕಳು ಇನ್ನೂ ಶಾಲೆಯಿಂದ ಬಂದಿಲ್ಲವಾ?" ಎಂದು ಜಿಮ್ ಕೇಳಿದ.

ಅವಳು ತಲೆ ಎತ್ತಿ ನೋಡಿ. "ಓ ಹಾಯ್ ಡಿಯರ್! ಮೆಲ್ ಬಂದು ಅವಳ ರೂಮಿನಲ್ಲಿದ್ದಾಳೆ. ರಯಾನ್ ಇನ್ನೂ ಬಂದಿಲ್ಲ. ಬರೋ ಹೊತ್ತಾಯಿತು. ಅಗೋ, ಬಂದನಲ್ಲ! ಹಾಯ್ ರಯಾನ್ ಮರಿ, ಯಾಕೆ, ಸುಸ್ತಾದ ಹಾಗೆ ಕಾಣುತ್ತಿದೀಯಲ್ಲ!"

ಕೈಯಲ್ಲಿದ್ದ ಭಾರದ ಬ್ಯಾಗ್ ಕೆಳಗಿಟ್ಟು ರಯಾನ್ "ಫ್ಯೂ! ಇದನ್ನು ಹೊತ್ತುಕೊಂಡು ಬರುವಷ್ಟು ಹೊತ್ತಿಗೆ ಸಾಕಾಯಿತು. ಡಿನ್ನರ್ ಯಾವಾಗ ಮಾಮ್! ನನಗೆ ಹೊಟ್ಟೆ ತಾಳ ಹಾಕ್ತಿದೆ!" ಎಂದ.

"ಸ್ಪೆಗೆಟಿ ರೆಡಿಯಾಗಿದೆ.  ಈ ಬೀನ್ಸ್ ಆವಿಯಲ್ಲಿ ಬೇಯಿಸಿದರೆ ಆಯಿತು. ನೀನು ಮುಖ ತೊಳೆದು ಬಾ. ಜಿಮ್ ನೀನೂ ಅಷ್ಟೆ. ಇವತ್ತು ಸಿಹಿಗೆ ಬ್ಲೂಬೆರೀ ಕಾಬ್ಲರ್" ಎಂದು ಸ್ಟೆಲ್ಲಾ ಮೇಲೆದ್ದಳು. ಸಿಹಿಯ ಹೆಸರು ಕೇಳಿ ರಯಾನ್ ಮುಖ ಅರಳಿತು.  

"ಕಿಮ್! ಇವತ್ತು ಬ್ಲೂಬೆರಿ ಕಾಬ್ಲರ್! ನಿನಗೆ ತುಂಬಾ ಇಷ್ಟ ಅಲ್ಲವಾ!" ಎಂದು ರಯಾನ್ ಹಿರಿಯ ಅಕ್ಕನನ್ನು ಕೂಗಿದ. ಅವಳು ಕಂಕುಳಲ್ಲಿ ಮಗುವನ್ನು ಎತ್ತಿಕೊಂಡು ಬಂದಾಗ ಮಗು ಅಳುತ್ತಿತ್ತು. ರಯಾನ್ ಮಗುವನ್ನು ರಮಿಸಲು ಏನೇನೋ ಮುಖಚೇಷ್ಟೆ ಮಾಡಿದ. ಮಗು ಅವನನ್ನು ನೋಡಿ ನಕ್ಕಿತು.

ಊಟಕ್ಕೆ ಮುಂಚೆ ದೇವರಿಗೆ ಪ್ರಾರ್ಥನೆ ನಡೆಯಿತು. ಜಿಮ್ ಯಾಂತ್ರಿಕವಾಗಿ ತಮ್ಮ ಮೇಜಿನ ಮೇಲಿರುವ ಆಹಾರಕ್ಕಾಗಿ ಧನ್ಯವಾದಗಳನ್ನು ಹೇಳುವಾಗ ಅವನಿಗೆ ಯಾಕೋ ಒಂದೆರಡು ಕ್ಷಣ ತಲ್ಲಣವಾಯಿತು. ಸ್ಟೆಲ್ಲಾಗೆ ಹೇಳಿಬಿಡಲೇ ಎಂದು ಯೋಚಿಸಿದ.  ಆದರೆ ಹೇಳಲು ಧೈರ್ಯವಾಗದು. 

"ಏಮೆನ್" ಎಂದು ಅವರು ಊಟ ಪ್ರಾರಂಭಿಸಿದರು. 

"ಮೆಲ್, ನಿನ್ನ ಶಾಲೆ ಹೇಗಿತ್ತು?" ಎಂದು ಜಿಮ್ ತಾನು ಪ್ರತಿದಿನ ಕೇಳುವ ಪ್ರಶ್ನೆ ಕೇಳಿದ.

"ಹುಂ, ಏನೂ ವಿಶೇಷ ಇರಲಿಲ್ಲ. ಮಿಸ್ ಓಪನ್‌ಹೈಮರ್ ಅವರ ಮನೆಯನ್ನು ಸಾಲದ ಕಂತು ತೀರಿಸಿಲ್ಲ ಅಂತ ಬ್ಯಾಂಕ್‌ನವರು ಜಪ್ತಿ ಮಾಡಿದರು ಅಂತ ಮಾತಾಡಿಕೋತಿದ್ರು."

ಜಿಮ್ ಕೈಯಿಂದ ಫೋರ್ಕ್ ಜಾರಿ ಬಿತ್ತು.

ಒಂದು ಕ್ಷಣ ಯಾರೂ ಮಾತಾಡಲಿಲ್ಲ.  ಸ್ಟೆಲ್ಲಾ ಬೇರೊಂದು ಫೋರ್ಕ್ ತಂದು ಜಿಮ್‌ಗೆ ಕೊಟ್ಟಳು.  ಜಿಮ್ ಮುಖ ಬಿಳಿಚಿಕೊಂಡಿದೆ ಎಂದು ಅವಳಿಗೆ ಅನ್ನಿಸಿತು."ನೀನು ಹುಷಾರಿಗಿದೀಯಾ ಜಿಮ್?" ಎಂದಳು. ಅವನು ಹೂಂ ಎಂದು ಊಟ ಮುಂದುವರೆಸಿದ.

ಸ್ವಲ್ಪ ಹೊತ್ತು ಮೌನ ಕವಿಯಿತು.

"ಇವತ್ತು ಶಾಲೆ ಹೇಗಿತ್ತು ರಯಾನ್?" ಎಂದು ಜಿಮ್ ಸಾವರಿಸಿಕೊಂಡು ಕೇಳಿದ.

"ನನ್ನ ಶೋ ಅಂಡ್ ಟೆಲ್ ಜಬರ್ದಸ್ತ್ ಆಗಿತ್ತು ಡ್ಯಾಡ್. ಎಲ್ರೂ ನಮ್ಮ ರೋಲಿಂಗ್ ಸ್ಟೋನ್ ನೋಡಿ ದಂಗಾದರು." ಎಂದು ಅವನು ಬಾಗಿಲ ಹತ್ತಿರ ಇಟ್ಟಿದ್ದ ಕಲ್ಲನ್ನು ನೋಡುತ್ತಾ ಹೇಳಿದ.  ಕಪ್ಪು ಬಣ್ಣದ ಹೊಳೆಯುವ ಶಿಲೆ. ಅವರ ಅಡುಗೆಕೋಣೆಯ ಬಾಗಿಲು ಗಾಳಿಗೆ ರಪ್ ಎಂದು ಮುಚ್ಚಿಕೊಳ್ಳುವುದನ್ನು ತಡೆಯಲು ಜಿಮ್ ಹೊಲದಲ್ಲಿ ಸಿಕ್ಕ ಈ ಕಲ್ಲನ್ನು ಬಳಸುತ್ತಾ ಈಗಾಗಲೇ ವರ್ಷಗಳೇ ಕಳೆದಿವೆ. ರಯಾನ್ ಹುಟ್ಟಿದ ದಿವಸವೇ ಜಿಮ್‌ಗೆ ಈ ಶಿಲೆ ಸಿಕ್ಕಿತ್ತು.  ಮಗ ಹುಟ್ಟಿದ ಸಂತಸದ ನೆನಪಿಗಾಗಿ ಕಲ್ಲನ್ನು ಮನೆಗೆ ತಂದಿಟ್ಟುಕೊಂಡಿದ್ದ. ಇದಾಗಿ ಎಂಟು ವರ್ಷಗಳೇ ಕಳೆದಿವೆ. 

"ಅದನ್ನು ನಾನು ಹೇಗೆ ಹೊತ್ತುಕೊಂಡು ಬಂದೆ ಅಂತ ಎಲ್ರೂ ಕೇಳಿದರು. ಅದು ಐವತ್ತು ಪೌಂಡ್ ತೂಕ ಅಂತ ನಾನು ಮೇಲೆ ಎತ್ತಿ ತೋರಿಸಿದೆ. ಎಲ್ರೂ ಅದನ್ನ ಎತ್ತಿಕೊಳ್ಳೋಕೆ ನಾನು ನಾನು ಅಂತ ಮುಂದೆ ಬಂದರು. ಡ್ಯಾಡ್, ಪಾಪ ಸ್ಟೀವ್ ಬ್ಯಾನನ್‌ಗೆ ಅದನ್ನು ಎತ್ತೋದಕ್ಕೆ ಆಗಲೇ ಇಲ್ಲ! ಹಾ ಹಾ!"  ಎಂದು ರಯಾನ್ ಉತ್ಸಾಹದಿಂದ ಹೇಳಿದ.

"ನೀನೇನು ಮಹಾ ಸೂಪರ್ ಮ್ಯಾನ್ ಅಲ್ಲ. ಬಸ್ಸಿನಲ್ಲಿ ತಾನೇ ತೊಗೊಂಡು ಹೋಗಿದ್ದು!" ಎಂದು ಮೆಲ್ ಅವನ ತಲೆ ಮೇಲೆ ಕುಟ್ಟಿದಳು.

ಸ್ಟೆಲ್ಲಾ ಎಲ್ಲರಿಗೂ ಬಟ್ಟಲುಗಳಲ್ಲಿ ಬ್ಲೂಬೆರಿ ಕಾಬ್ಲರ್ ಮತ್ತು ಐಸ್ ಕ್ರೀಮ್  ತಂದುಕೊಟ್ಟಳು. ಜಿಮ್ ಇನ್ನೂ ಯೋಚನೆಯಲ್ಲಿ ಮುಳುಗಿರುವುದನ್ನು ಅವಳು ಗಮನಿಸಿದಳು.

ರಾತ್ರಿಯ ನಿಶ್ಶಬ್ಧತೆ ಕವಿದುಕೊಂಡಿತು. ಮಕ್ಕಳು ತಮ್ಮ ಕೋಣೆಗಳಿಗೆ ತೆರಳಿದರು. ಸ್ಟೆಲ್ಲಾ ತಟ್ಟೆ ಬಟ್ಟಲುಗಳನ್ನು ತೊಳೆಯಲು ಪ್ರಾರಂಭಿಸಿದಳು. ಜಿಮ್ ಅವುಗಳನ್ನು ಒರೆಸಿ ಒಪ್ಪವಾಗಿಡಲು ಸಹಾಯಕ್ಕೆ ನಿಂತ. 

"ಜಿಮ್, ಎಲ್ಲಾ ಸರಿಯಾಗಿದೆ ತಾನೇ?" ಎಂದು ಸ್ಟೆಲ್ಲಾ ಕೇಳಿದಳು. ಕೊನೆಗೆ ಜಿಮ್ ಹೇಳಲೇ ಬೇಕಾಯಿತು. ತಾನು ಹೊಲದ ಸಾಲವನ್ನು ಕಟ್ಟಲು ಎಂಟನೇ ಸಲ ವಿಫಲನಾಗಿದ್ದು.  ಸ್ಟೆಲ್ಲಾ ಗಾಬರಿಯಿಂದ ಅವನ ವ್ಯಾಖ್ಯಾನ ಕೇಳಿದಳು.  ಹಿಂದಿನ ವರ್ಷ ಅವರಿಗೆ ಅನುಕೂಲವಾಗಿರಲಿಲ್ಲ. ಹಿರಿಯ ಮಗಳು ಕಿಮ್ ಅವಳ ಸ್ನೇಹಿತನ ಜೊತೆಗೆ ಓಡಿಹೋದಳು. ಹಾಗೆ ಹೋದವಳು ಮೂರೇ ತಿಂಗಳಲ್ಲಿ ಜಗಳವಾಡಿಕೊಂಡು ಮರಳಿ ಬಂದಳು. ಅವಳು ಗರ್ಭಿಣಿ ಎಂದು ತಿಳಿದು ಅವಳ ಸ್ನೇಹಿತ ಡ್ಯಾನಿ ಅಬಳ ಜೊತೆಗೆ ಜಗಳ ತೆಗೆದ. ಅವಳ ಎಲ್ಲಾ ಆಸ್ಪತ್ರೆಯ ಖರ್ಚೂ ಇವರ ಮೇಲೆ ಬಿತ್ತು. ಸಾಲದು ಎಂಬಂತೆ ಜಿಮ್ ಹೊಲದಲ್ಲಿ ಕೆಲಸ ಮಾಡುವಾಗ ಸ್ಲಿಪ್ ಡಿಸ್ಕ್ ಉಂಟಾಗಿ ಹಲವಾರು ತಿಂಗಳು ಹೊಲದ ಕೆಲಸಕ್ಕೆ ವಿದಾಯ ಹೇಳಬೇಕಾಯಿತು.  ಕೂಡಿಟ್ಟ  ಗಂಟು ಕರಗಿ ಸಾಲದ ಹೊರೆ ಏರಿತು.  ಸ್ಟೆಲ್ಲಾಗೆ ಮಗಳು ಮತ್ತು ಮೊಮ್ಮಗನನ್ನು ನೋಡಿಕೊಳ್ಳುವ ಜವಾಬ್ದಾರಿಯ ಜೊತೆಗೆ ಜಿಮ್ ಮತ್ತು ಮಕ್ಕಳನ್ನು ನೋಡಿಕೊಳ್ಳುವ ಕೆಲಸ.  ಹೀಗಾಗಿ ತಮ್ಮ ಹಣದ ಸಂಕಷ್ಟವನ್ನು ಜಿಮ್ ಮುಚ್ಚಿಟ್ಟ. ಈಗ ಅದು ವಿಪರೀತಕ್ಕೆ ಹೋಗಿದೆ. ಹೊಲ ತಮ್ಮ ಕೈಯಿಂದ ಜಾರಿಹೋಗುವ ಸನ್ನಿವೇಶ ಬಂದಿದೆ.

ಸ್ಟೆಲ್ಲಾ ಹೆಚ್ಚು ಮಾತಾಡುವ ಸ್ವಭಾವದವಳಲ್ಲ. ಸ್ವಲ್ಪಹೊತ್ತು ಸುಮ್ಮನೇ ಇದ್ದಳು. ಹೊರಗೆ ಜೋರಾಗಿ ಗಾಳಿ ಬೀಸಿತು. ರಪ್ ಎಂದು ಅಡುಗೆಮನೆಯ ಬಾಗಿಲು ಮುಚ್ಚಿಕೊಂಡಿತು.

 "ದೇವರು ನಮ್ಮನ್ನು ಪರೀಕ್ಷೆ ಮಾಡಲು ನಮ್ಮ ಬಾಗಿಲಿಗೆ ಜೋರಾದ ಗಾಳಿ ಕಳಿಸುತ್ತಾನೆ. ಆದರೆ ಬಾಗಿಲು ಮುಚ್ಚಿಕೊಳ್ಳದಂತೆ ತಡೆಯಲು ನಮಗೊಂದು ಶಿಲೆಯನ್ನೂ ಅವನೇ ಕೊಡುತ್ತಾನೆ," ಎಂದು ರಯಾನ್ ಬ್ಯಾಗಿನಿಂದ ತೆಗೆದಿಟ್ಟ ಕಲ್ಲನ್ನು ಬಾಗಿಲಿಗೆ ಅಡ್ಡವಾಗಿಟ್ಟಳು.

###

ಮರುದಿನ ಬೆಳಗ್ಗೆ ಮೆಲ್ ಮತ್ತು ರಯಾನ್ ಶಾಲೆಗೆ ಮತ್ತು ಜಿಮ್ ಹೊಲಕ್ಕೆ ಹೋದ ನಂತರ ಕಿಮ್‌ಗೆ ಉಪಾಹಾರ ನೀಡಿ "ನಾನು ಯೂನಿವರ್ಸಿಟಿಗೆ ಹೋಗಿ ಬರುತ್ತೇನೆ ಕಿಮ್. ನೀನು ಮನೆ ನೋಡಿಕೋ. ಇಲ್ಲಿಂದ ಹೋಗಲು ಒಂದೂವರೆ ತಾಸು. ನಾನು ಬರುವುದು ಹೊತ್ತಾಗಬಹುದು. ನೀನು ಸಾಧ್ಯವಾದರೆ ಅಡುಗೆ ಶುರು ಮಾಡು" ಎಂದಳು.

"ಅಮ್ಮಾ! ಯೂನಿವರ್ಸಿಟಿಗೆ ಹೋಗಿ ನೀನೇನು ಮಾಡೋದಿದೆ!" ಎಂದು ಕಿಮ್ ಆಶ್ಚರ್ಯದಿಂದ ಕೇಳಿದಳು.

"ನೆನ್ನೆ ಒಂದು ಟಿವಿ ಪ್ರೋಗ್ರಾಮ್ ನೋಡುತ್ತಿದ್ದೆ. ಒಬ್ಬ ಪ್ರೊಫೆಸರ್ ಅದರಲ್ಲಿ ಬಹಳ ಕುತೂಹಲಕರ ವಿಷಯಗಳನ್ನು ಹೇಳುತ್ತಿದ್ದಳು. ಅದನ್ನು ನೋಡಿದಾಗ ಏನೋ ಕುತೂಹಲ ಉಂಟಾಗಿ ಪ್ರೊಫೆಸರ್ ಅವರನ್ನು ನೋಡಬೇಕು ಅನ್ನಿಸಿತು. ಫೋನ್ ಮಾಡಿ ಅವರ ಜೊತೆ ಭೇಟಿಗಾಗಿ ಸಮಯ ಕಾದಿರಿಸಿದ್ದೇನೆ" ಎಂದು ತನ್ನ ಬ್ಯಾಗನ್ನು ಹೊರಲಾರದೇ ಹೊತ್ತು ಹೊರಗೆ ಪಾರ್ಕ್ ಮಾಡಿದ್ದ ಹಳೆಯ ಫೋರ್ಡ್ ಕಾರಿನ ಕಡೆಗೆ ಹೊರಟಳು. 

"ಬ್ಯಾಗಿನಲ್ಲಿ ಏನೇನು ತೊಗೊಂಡಿದ್ದೀ! ಅಜ್ಜಿಗೆ ಬೈಬೈ ಮಾಡು ಹನೀ!" ಎಂದು ಕಿಮ್ ಕೈ ಬೀಸಿದಳು. 

###

ಸ್ಟೆಲ್ಲಾ ಮನೆಗೆ ಬರುವುದು ನಿಜಕ್ಕೂ ತಡವಾಯಿತು. ಕಿಮ್ ಅಡುಗೆ ಮುಗಿಸಿ ಟೇಬಲ್ ಜೋಡಿಸಿದ್ದಳು.  ಸ್ಟೆಲ್ಲಾ ಕಾರನ್ನು ಪಾರ್ಕ್ ಮಾಡಿ ಬಂದಾಗ ಜಿಮ್ ಆತಂಕದಿಂದ ಅವಳನ್ನು ಎದಿರುನೋಡುತ್ತಿದ್ದ. ರಯಾನ್ ಓಡಿ ಬಂದು ಅಮ್ಮನ ಕೈಯಲ್ಲಿದ್ದ ಬ್ಯಾಗನ್ನು ಕೈಗೆ ತೆಗೆದುಕೊಂಡ.

"ಅಬ್ಬಾ! ಏನು ಭಾರ ಇದೆ! ಏನಿದೆ ಇದರಲ್ಲಿ!" ಎಂದು ಉದ್ಗರಿಸಿದ.

"ರೋಲಿಂಗ್ ಸ್ಟೋನ್!" ಎಂದು ಸ್ಟೆಲ್ಲಾ ನಕ್ಕಳು. "ನಾನೂ ಶೋ ಅಂಡ್ ಟೆಲ್ ಮಾಡಲು ಯೂನಿವರ್ಸಿಟಿಗೆ ಹೋಗಿದ್ದೆ  ರಯಾನ್!" 


"ಎಂದೂ ಇಲ್ಲದೆ ನೀನು ಇವತ್ತು ಯೂನಿವರ್ಸಿಟಿಗೆ ಹೀಗೆ ಏಕಾಏಕಿ ಹೊರಟುನಿಂತಿದ್ದು ಯಾಕೆ? ನಿನ್ನ ಮೊಬೈಲ್ ಫೋನಿಗೆ ನಾವು ಒಂದು ಹತ್ತು ಸಲ ಕಾಲ್ ಮಾಡಿದೆವು!" ಎಂದು ಜಿಮ್ ಸ್ವಲ್ಪ ಅಸಮಾಧಾನದಿಂದ ನುಡಿದ. 

"ಓ! ಸಾರಿ ಹನೀ! ನಾನು ಫೋನ್ ಚಾರ್ಜ್ ಮಾಡುವುದನ್ನೇ ಮರೆತಿದ್ದೆ.  ಊಟಕ್ಕೆ ತಡವಾಯಿತು! ನಾನು ಮುಖ ತೊಳೆದು ಬರ್ತೀನಿ. ನೀವು ಕೂತುಕೊಳ್ಳಿ" ಎಂದು ಅವಳು ಬಾತ್‍‍ರೂಮಿಗೆ ಹೊರಟಾಗ ಹೊರಗೆ ಕಾರ್ ಬಂದು ನಿಂತ ಸದ್ದಾಯಿತು. 

"ಡ್ಯಾನಿ!" ಎಂದು ಕಿಮ್ ಉದ್ಗರಿಸಿದಳು.

ಗಡ್ಡಬಿಟ್ಟು ಕೆದರಿದ ತಲೆಗೂದಲನ್ನು  ಹೊತ್ತಿದ್ದ ಡ್ಯಾನಿ ಅಪರಾಧಿ ಭಾವ ಹೊತ್ತು ಕೆಳಗಿಳಿದು ಬಂದು ನಿಂತ. ಎಲ್ಲರೂ ಸ್ವಲ್ಪ ಹೊತ್ತು ಏನು ಹೇಳುವುದೆಂದು ತಿಳಿಯದೇ ಮೌನವಾಗಿದ್ದರು. ಕಿಮ್ ಕಂಕುಳಲ್ಲಿದ್ದ ಮಗು ಮಿಸುಕಾಡಿ ಸಣ್ಣಗೆ ಮುಲುಗಿತು. ಕಿಮ್ ಅದರ ಬೆನ್ನು ತಟ್ಟಿದಳು. ಡ್ಯಾನಿ ಅವಳ ಕಡೆ ಪ್ರಶ್ನಾರ್ಥಕವಾಗಿ ನೋಡಿದ.

"ಹೌದು, ಇವನು ನಿನ್ನ ಮಗನೇ!" ಎಂದು ಕಿಮ್ ನುಡಿದಳು. 

ಡ್ಯಾನಿ ಮುಂದೆ ಬಂದು ಕೈಚಾಚಿ ಮಗುವನ್ನು ಎತ್ತಿಕೊಂಡ. ಮಗು ಅವನ ಗಡ್ಡ ನೋಡಿ ನಕ್ಕಿತು. ಎಲ್ಲರಿಗೂ ನಗು ಬಂತು. 

"ಇಷ್ಟು ದಿವಸ ನಾನು ಈ ಕಡೆ ಬರದೇ ಇದ್ದದ್ದು ತಪ್ಪು. ಕಿಮ್, ನನ್ನನ್ನು ಕ್ಷಮಿಸು. ನನ್ನ ಮೇಲೆ ಬಿದ್ದ ಜವಾಬ್ದಾರಿಯನ್ನು ಕಂಡು ನಾನು ಹೆದರಿಬಿಟ್ಟೆ. ಸರಿಯಾದ ಕೆಲಸ ಕೈಯಲ್ಲಿಲ್ಲದೆ ಮಗುವನ್ನು ಹೇಗೆ ನೋಡಿಕೊಳ್ಳುವುದು!  ಕಳೆದ ಎರಡು ತಿಂಗಳಿನಿಂದ ನಾನು ಹೂವು ಡೆಲಿವರಿ ಮಾಡುವ ಕೆಲಸ ಪ್ರಾರಂಭಿಸಿದ್ದೇನೆ. ಸಂಜೆ ರೆಸ್ಟೋರೆಂಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಕಿಮ್, ನನ್ನ ಜೊತೆ ಬರುತ್ತೀಯಾ?" 

ಕಿಮ್ ಮೌನವಾಗಿ ಅಳುತ್ತಾ ಹೂಂ ಎಂದಳು. 

ಸ್ಟೆಲ್ಲಾ  ಎಲ್ಲರನ್ನೂ ಊಟಕ್ಕೆ ಕರೆದಳು.  ಊಟದಲ್ಲಿ ಅವಳು ಕೊಂಡುತಂದಿದ್ದ  ವಿಶೇಷ ತಿನಿಸುಗಳನ್ನು ನೋಡಿ ಜಿಮ್ ಹೌಹಾರಿ ಅವಳ ಕಡೆಗೆ ನೋಡಿದ. "ನೆನ್ನೆ ಅಷ್ಟೆಲ್ಲಾ ಮಾತಾಡಿದ ನಂತರ ನೀನು ಹೀಗೆ ದುಂದು ಮಾಡಬಹುದೇ?" ಎನ್ನುವ ಭಾವ ಅವನ ನೋಟದಲ್ಲಿತ್ತು. ಸ್ಟೆಲ್ಲಾ ಸುಮ್ಮನೇ ನಕ್ಕು "ಜಿಮ್, ಇವತ್ತು ನಾನು ಧನ್ಯವಾದ ಹೇಳುತ್ತೇನೆ" ಎಂದಳು. ಜಿಮ್ ಸುಮ್ಮನಿದ್ದ.

"ಕರುಣಾಮಯಿ ದೇವರೇ, ನಮ್ಮನ್ನು ಪರೀಕ್ಷಿಸಲು ನೀನು ಕಷ್ಟಗಳನ್ನು ಕೊಡುತ್ತೀಯಷ್ಟೇ ಅಲ್ಲ, ಅವುಗಳನ್ನು ಎದುರಿಸಲು ಶಕ್ತಿಯನ್ನು ಕೊಡುವವನೂ ನೀನೇ. ನಿನಗೆ ಧನ್ಯವಾದಗಳು. ಮುಳುಗುತ್ತಿದ್ದ ಡ್ಯಾನಿ ಮತ್ತು  ಕಿಮ್  ಅವರ ಸಂಸಾರ ಮತ್ತೆ  ತೇಲುವಂತೆ ಮಾಡಿದ್ದಕ್ಕೆ ಧನ್ಯವಾದಗಳು. ನಮ್ಮ ಮೇಜಿನ ಮೇಲಿರುವ ಈ ಊಟದ ಪದಾರ್ಥಗಳಿಗಾಗಿ ಧನ್ಯವಾದಗಳು.  ಮತ್ತು ನಮ್ಮ ಜೀವನದಲ್ಲಿ ಈ ಕಲ್ಲನ್ನು ಎತ್ತಿಹಾಕಿದ್ದಕ್ಕೆ ಧನ್ಯವಾದಗಳು.  ಏಮೆನ್."

ಎಲ್ಲರೂ "ಏಮೆನ್" ಅಂದರೂ ಅವಳ ಮಾತಿನ ಅರ್ಥ ಅವರು ಯಾರಿಗೂ ಆಗಲಿಲ್ಲ. 

"ಸ್ಟೆಲ್ಲಾ, ಇದೇನು ನೀನು ಗ್ರೇಸ್ ಹೇಳುವ ರೀತಿ!" ಎಂದು ಜಿಮ್ ನಸುಮುನಿಸಿನಿಂದ ಹೇಳಿದ. 

"ಜಿಮ್, ನಾನು ಹೇಳುವುದನ್ನು ಕೇಳು. ನನಗೆ ಏನೋ ಮುಖ್ಯವಾದದ್ದು ಹೇಳುವುದಿದೆ.  ಇವತ್ತು ನಾನು ಯೂನಿವರ್ಶಿಟಿಯ ಜಿಯಾಲಜಿ ಡಿಪಾರ್ಟ್‍‍ಮೆಂಟಿಗೆ ಹೋಗಿ ಅಲ್ಲಿ ಪ್ರೊಫೆಸರ್ ಒಬ್ಬರನ್ನು ಭೇಟಿ ಮಾಡಿಕೊಂಡು ಬರುತ್ತಿದ್ದೇನೆ. ನಾನು ನೆನ್ನೆ ಇದೇ ಪ್ರೊಫೆಸರ್ ನಡೆಸಿದ ಕಾರ್ಯಕ್ರಮವನ್ನು ಟಿವಿಯಲ್ಲಿ  ನೋಡಿದೆ.  ಮೀಟಿಯೊರೈಟ್ ಬಗ್ಗೆ ಅವರ ಕಾರ್ಯಕ್ರಮ ತುಂಬಾ ರೋಚಕವಾಗಿತ್ತು. ಕುತೂಹಲದಿಂದ ನಾನು ನಮ್ಮ ರೋಲಿಂಗ್ ಸ್ಟೋನ್ ಕಲ್ಲನ್ನು ತೆಗೆದುಕೊಂಡು ಹೋಗಿ ತೋರಿಸಿದೆ."

ಎಲ್ಲರೂ ಸ್ಟೆಲ್ಲಾ ಕಡೆಗೇ ನೋಡುತ್ತಿದ್ದರು. 

"ನಮ್ಮ ರೋಲಿಂಗ್ ಸ್ಟೋನ್ ಕಲ್ಲಿನಲ್ಲಿ ಏನೋ ವಿಶೇಷವಿದೆ ಅಂತ ನಾವೆಲ್ಲರೂ ಆಗಾಗ ಹೇಳುತ್ತಲೇ ಇರುತ್ತೇವೆ. ಅದು ಏನು ಅಂತ ತೋರಿಸಿಯೇ ಬಿಡೋಣ ಎಂದು ಪ್ರೊಫೆಸರ್ ಅವರನ್ನು ಭೇಟಿ ಮಾಡಿದೆ. ನಾನು ಊಹಿಸಿದ ಹಾಗೆ ಅದು ಹೊರಗಿನಿಂದ ಬಂದು ಬಿದ್ದ ಮೀಟಿಯೋರೈಟ್ ಅಂತ ಪ್ರೊಫೆಸರ್ ಒಪ್ಪಿದರು. ಅಷ್ಟೇ ಅಲ್ಲ, ಅದನ್ನು ಖರೀದಿ ಮಾಡಲು ಯೂನಿವರ್ಸಿಟಿ ಮುಂದಾಗಿದೆ. ಕಲ್ಲನ್ನು ಅದೆಷ್ಟೋ ರೀತಿಯಾಗಿ ಪರೀಕ್ಷೆ  ಮಾಡಿದರು. ಕೊನೆಗೆ ಅವರು ನಮ್ಮ ರೋಲಿಂಗ್ ಸ್ಟೋನ್ ಗಾಗಿ ಎಷ್ಟು   ಹಣ ಕೊಡಲು ಮುಂದಾಗಿದ್ದಾರೆ ಊಹಿಸುತ್ತೀರಾ?"

ಯಾರೂ ಮಾತಾಡಲಿಲ್ಲ. ಕಿಮ್ "ಏನು, ನೂರು ಡಾಲರ್ ಇರಬಹುದಾ?!" ಎಂದು ಕೇಳಿದಳು. 

"ಇನ್ನೂ ಜಾಸ್ತಿ"

"ಸಾವಿರ?" ಎಂದ ಡ್ಯಾನಿ.

"ಇನ್ನೂ ಜಾಸ್ತಿ."

"ಎರಡು ಸಾವಿರ?!" ಎಂದ ರಯಾನ್.

"ನೀವು ಯಾರೂ ಊಹಿಸಲು ಸಾಧ್ಯವೇ ಇಲ್ಲ" ಎಂದು ಸ್ಟೆಲ್ಲಾ ನಕ್ಕಳು. 

"ಏನು, ಹತ್ತುಸಾವಿರವೇ!' ಎಂದು ಜಿಮ್ ಕೇಳಿದ. 

"ನಮ್ಮ ರೋಲಿಂಗ್ ಸ್ಟೋನ್ ವಿಶೇಷವೆಂದರೆ ಅದು ತುಂಬಾ ತುಂಬಾ ಹಳೆಯದಂತೆ. 4 ಲಕ್ಷ ಕೋಟಿ ವರ್ಷ ಹಳೆಯದಂತೆ! ಅವರು ನೂರು ಸಾವಿರ ಡಾಲರ್ ಕೊಡಲು ಮುಂದಾಗಿದ್ದಾರೆ, ಜಿಮ್!"

"ಗುಡ್ ಲಾರ್ಡ್!" ಎಂದು ಜಿಮ್ ಉದ್ಗರಿಸಿದ. ಡ್ಯಾನಿ ಸಿಳ್ಳೆ ಹಾಕಿದ. ರಯಾನ್ ಮೇಲೆದ್ದು ನರ್ತಿಸಿದ. ಮೆಲ್ ಅವನ ತಲೆ ಕುಟ್ಟಿದಳು. ಕಿಮ್ ತೊಡೆಯ ಮೇಲೆ ಕುಳಿತಿದ್ದ ಮಗು ನಕ್ಕು ಅಮ್ಮನನ್ನು ತಬ್ಬಿಕೊಂಡಿತು. 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

"ಬಾರಿಸು ಕನ್ನಡ ಡಿಂಡಿಮವ" - ಒಂದು ಮರು ಓದು

ಕರ್ನಾಟಕ ನಾಡಗೀತೆ - ಒಂದು ಸರಳ ಅರ್ಥವಿವರಣೆ

ಆಡು ಮುಟ್ಟದ ಸೊಪ್ಪಿಲ್ಲ (ಹರಟೆ)