ಪೋಸ್ಟ್‌ಗಳು

ದ್ರಾಕ್ಷಿಯ ಗೊಂಚಲು ಮತ್ತು ಕವಿತೆ

ಇಮೇಜ್
ದ್ರಾಕ್ಷಿಯ ಗೊಂಚಲು  ಸೂರ್ಯನ ಬೆಳಕಿನಲ್ಲಿ ಹೊಳೆಯುತ್ತಿದೆ: ಹಸಿರು, ಕೆಂಪು, ಊದಾ, ನೇರಳೆ, ಕಪ್ಪು, ಕಿತ್ತಳೆ! ಹೀಗೆ ಒಂದೊಂದು ಹಣ್ಣಿಗೂ ಒಂದೊಂದು ವರ್ಣ ತುಂಬುತ್ತಾ ಅದೆಷ್ಟು ಹೊತ್ತು ವ್ಯಯಿಸುವೆ ಎಂದು ಕೋಪಿಸಿಕೊಂಡು ಕೇಳಿದೆ ಪ್ರಕೃತಿಯನ್ನ. ಎಷ್ಟು ದಿನ ಇದ್ದೀತು ಗೊಂಚಲಿನ ಬಣ್ಣ! ಗಾಳಿ ಬಿಸಿಲಿಗೆ ಪಕ್ವವಾಗಿ ಯಾರೋ ಕಿತ್ತರೆ ಸರಿ ಕಿತ್ತದಿದ್ದರೆ ಕೆಳಬಿದ್ದು ಸೇರುವುದು ಮಣ್ಣ! ನಕ್ಕು ನುಡಿಯಿತು ಅದೇ ನನ್ನ ಪ್ರಕೃತಿ ಏನೇ ಮಾಡಿದರೂ ಸಾವಧಾನ! ನೀನು ಬರೆದಾಗ ಕವಿತೆ ಹೇಗೆ ಒಂದೊಂದೇ ಪದವನ್ನೂ ತೂಗಿ ಅಳೆದು ಸುರಿದು ಬದಲಿಸಿ  ಅಲ್ಲಿಂದ ಇಲ್ಲಿ ಕದಲಿಸಿ ಒಂದೆಡೆ ಬಿಡಿಸಿ ಇನ್ನೊಂದೆಡೆ ಸೇರಿಸಿ ಒದ್ದಾಡುವಾಗ ಬಂದವರು ಯಾರೋ ಎಷ್ಟು ದಿನ ಈ ಕವಿತೆಯ ಜೀವನ ಎಂದು ಕೇಳಿದರೆ ಏನು ಹೇಳುವೆ ಉತ್ತರವನ್ನ! ಇಷ್ಟಾಗಿ ನಿನ್ನ ನಿರೀಕ್ಷೆ ಮೀರಿ  ಕವಿತೆ ಅಮರವಾದರೆ ಆಗ ಕೈ ಹಿಸುಕುತ್ತ ಅಯ್ಯೋ ಇನ್ನಷ್ಟು ಚೆನ್ನಾಗಿ ಬರೆಯಬೇಕಿತ್ತು  ಎಂದು ಅನುಭವಿಸುವೆಯಾ ಕೊರಗಿನ ಕಷ್ಟ! (ಜಲವರ್ಣ: ಕಾರಾ ಬ್ರೌನ್) ಚಿತ್ರಕವಿತೆ: ಸಿ. ಪಿ. ರವಿಕುಮಾರ್

ಅತಿಥಿಪಾತ್ರ

ಇಮೇಜ್
  ನನ್ನ ಮೇಜಿನ ಮೇಲೆ ಕೂತಿದೆ ಅಮೃತ ಶಿಲೆಯ ಮೇಲೆ ಕುಸುರಿ ಕೆಲಸದ ಪೆನ್ ಹೋಲ್ಡರ್ ಅಲ್ಲಿವೆ ಒಂದಕ್ಕಿಂತ ಒಂದು ಚೆಂದದ ಪೆನ್ ಓವರ್ ವೇಟ್ ಎನ್ನಿಸುವ ಕಪ್ಪು ಬಣ್ಣದ್ದು ಸಮ್ಮೇಳನದ ಹೆಸರನ್ನು ಹೊತ್ತ ನೀಲಿ ಬಣ್ಣದ್ದು ಕಂಪನಿಯ ಹೆಸರುಳ್ಳ ಕೆಂಪು ಬಣ್ಣದ್ದು ಎಣಿಸಿದರೆ ಹತ್ತಾದರೂ ಇರಬಹುದು ಸಂಖ್ಯೆ ಎಲ್ಲ ಬಾಲ್ ಪಾಯಿಂಟ್, ಈಗಿಲ್ಲ ಇಂಕೇ ಬೇಕಾದಾಗ ಕೈಗೆತ್ತಿಕೊಂಡು ಬರೆದಾಗ ಮಾತ್ರ ಬಯಲಾಗುವುದು ಇವುಗಳದ್ದು ಬರೀ ಅತಿಥಿ ಪಾತ್ರ ಗೋಗರೆದರೂ ಬೈದರೂ "ಬರೆ ಬರೆ" ಎಂದು ಅಕ್ಷರ ಹಾಗಿರಲಿ ಮೂಡದು ಗೆರೆ ಒಂದು! ಕೊನೆಗೆ ಸಿಕ್ಕುವ  ಐದು ರೂಪಾಯಿ ಪೆನ್ನು ಬರೆಯಲು ಅದಕ್ಕೆ ಉತ್ಸಾಹವಿದೆ ಇನ್ನೂ! - ಸಿ.ಪಿ. ರವಿಕುಮಾರ್

ಒಬ್ಬಂಟಿ

ಇಮೇಜ್
ಬಹಳ ಮುಖ್ಯ ನೀನು ಹೊರಗೆ ಹೋಗಿ ಒಬ್ಬಂಟಿ ವಿರಮಿಸುವುದು ಒಂದು ಮರದ ಕೆಳಗೆ, ಆಗ ಜೊತೆಯಲ್ಲಿ ಕೊಂಡೊಯ್ಯದಿರು ಯಾವುದೇ ಪುಸ್ತಕ, ಯಾರೇ ಸಹಚರ ನಿನ್ನನ್ನು ಹೊರತು. ಗಮನಿಸು  ಕೆಳಗೆ ಬೀಳುವ ಎಲೆಯನ್ನು, ನೀರು ದಡಕ್ಕೆ ಬಡಿಯುವ ಸದ್ದನ್ನು, ಕೇಳು ಮೀನುಗಾರರ ಹಾಡನ್ನು. ಹಕ್ಕಿಯ ಹಾರಾಟವನ್ನು ನೋಡು, ಮತ್ತು ಗಮನಿಸು ನಿನ್ನದೇ ಆಲೋಚನೆಗಳನ್ನು: ನಿನ್ನ ಮನೋಭೂಮಿಕೆಯಲ್ಲಿ ಅವು ಒಂದು ಇನ್ನೊಂದರ ಬೆನ್ನಟ್ಟಿ ಹೋಗುವುದನ್ನು. ಹೀಗೆ ನೀನು ಒಬ್ಬನೇ ಇವನ್ನೆಲ್ಲ ಗಮನಿಸಬಲ್ಲೆಯಾದರೆ ದಕ್ಕುವುವು ಅನರ್ಘ್ಯ ಐಶ್ವರ್ಯಗಳು ನಿನಗೆ ಅವುಗಳ ಮೇಲೆ ಹೇರಲಾರದು ತೆರಿಗೆ ಯಾವುದೇ ಸರಕಾರ ಅವುಗಳನ್ನು ಭ್ರಷ್ಟಗೊಳಿಸಲಾಗದು ಯಾವುದೇ ಮಾವನಾಧಿಕಾರ ಅದು ಯಾರೂ ನಾಶ ಮಾಡಲಾಗದ ಕೋಶಾಗಾರ. ಜಿಡ್ಡು ಕೃಷ್ಣಮೂರ್ತಿ (ಕನ್ನಡಕ್ಕೆ: ಸಿ. ಪಿ. ರವಿಕುಮಾರ್) [ಕ್ಯಾಮೆರಾ ಕೂಡಾ ಬೇಡ :) ]

ಸಾಕ್ರಟೀಸ್ ಹೇಳಿದ ಜಾಣ್ಮೆ

ಇಮೇಜ್
  "ನಿನಗೆ ಏನೂ ತಿಳಿದಿಲ್ಲ ಎಂಬುದರಲ್ಲೇ ಎಲ್ಲಾ ತಿಳಿವಳಿಕೆಯೂ ಇದೆ"  ಹೀಗೆ ಯಾರು ಹೇಳಿರಬಹುದು? ಅ. ತನ್ನ ಪಿಎಚ್. ಡಿ. ವಿದ್ಯಾರ್ಥಿಗೆ ಓರ್ವ ಸೂಪರ್ ವೈಸ್ ಆದ ಸೂಪರ್ವೈಸರ್ ಬ. ಹೊಸದಾಗಿ ಮದುವೆಯಾಗಿ ಮನೆಗೆ ಬಂದ ಸೊಸೆಗೆ ಓರ್ವ ಸಾಸ್ ಭೀ ಕಭೀ ಬಹೂ ಥೀ ಎಂಬುದನ್ನು ಮರೆತ ಅತ್ತೆ ಕ.  ತದ್ವಿರುದ್ಧವಾದವುಗಳನ್ನು ಒಂದೇ ವಾಕ್ಯದಲ್ಲಿ ಬಳಸಿ "ಯೂ ಕನ್ ಫ್ಯೂಸ್" ಅಸ್ ಎನ್ನಿಸಿಕೊಳ್ಳುತ್ತಿದ್ದ ಕನ್ಫ್ಯೂಷಿಯಸ್ ಡ. ಇಂಥ ಹೇಳಿಕೆಗಳನ್ನು ಕೊಟ್ಟು ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದ ಸಾಕ್ರಟೀಸ್ ಮಹಾಶಯನಿಗೆ ಅವನ ಜಗಳಗಂಟಿ ಹೆಂಡತಿ ಇದಕ್ಕೆ ಉತ್ತರ ಸಾಕ್ರಟೀಸ್ ಎಂದು ನನ್ನ ಮಿತ್ರ ರಾಜಾರಾಂ ಹೇಳಿದರು.  ಅದು ಆದದ್ದು ಹೀಗೆ. ಶಿವರಾತ್ರಿಯ ಹಿಂದಿನ ಬೆಳಗ್ಗೆ ನಾವು ಮೂವರು ಅರ್ಥಾತ್ ಮರಿಗೌಡ, ರಾಜಾರಾಂ ಮತ್ತು ನಾನು ಶಿವಶಂಕರದರ್ಶಿನಿಗೆ ದರ್ಶನ ಪಡೆಯಲು ಬಂದಿದ್ದೆವು. ತಾಳಿ, ತಾಳಿ, ನೀವು ನಮ್ಮ ಬಗ್ಗೆ ತಾತ್ಸಾರ ಭಾವನೆ ತಳೆಯುವ ಮುನ್ನವೇ ಹೇಳಿಬಿಡುತ್ತೇನೆ. ನಾವು ಮೊದಲು ಭವಾನೀಶಂಕರನ ಗುಡಿಗೆ ಹೋಗಿ ಶಿವನಿಗೆ ಹಾಲು ನೀರನ್ನು ಅಥವಾ ನೀರು ಹಾಲನ್ನು ಎರೆದು ನಂತರವೇ ಶಿವಶಂಕರ ದರ್ಶಿನಿಗೆ ಬಂದಿದ್ದೆವು. ಭವಾನೀಶಂಕರನ ಗುಡಿಯಿಂದ ಕೇವಲ ಹತ್ತು ಹೆಜ್ಜೆಗಳ ನಡೆಯ ದೂರದಲ್ಲಿ ಸ್ಥಿತವಾಗಿರುವ ಶಿವಶಂಕರ ದರ್ಶಿನಿಯಲ್ಲಿ ಅಂದು ಶಿವರಾತ್ರಿ ಸ್ಪೆಷಲ್ ಊಷ್ಟಾ ಇದ್ದಿತು.  ಏನಿದು ಊಷ್ಟಾ ಎಂದು ಹುಬ್ಬೇರಿಸಿದವರಿಗೆ ಸಂದೇಹ ನಿವಾರಣೆ ಮಾಡಿ

ಬಾಣ ಮತ್ತು ಹಾಡು

ಇಮೇಜ್
ಮೂಲ: ಎಚ್. ಡಬ್ಲ್ಯೂ. ಲಾಂಗ್ ಫೆಲೋ ಬಿಲ್ಲಿಗೇರಿಸಿ ಬಿಟ್ಟರೆ ಬಾಣವನ್ನು ಗಾಳಿಯಲ್ಲಿ, ಎಲ್ಲಿ ಹೋಗಿ ಬಿತ್ತೋ ಧರೆಯ ಪಾತಳಿಯಲ್ಲಿ! ಎಷ್ಟು ತೀವ್ರವಾದದ್ದು ಎಂದರೆ ಶರವೇಗ, ಹಿಂಬಾಲಿಸಿದ ಕಣ್ಣು ಸೋತುಹೋಯಿತು ಬೇಗ. ಉಸಿರಿದೆನು ಗಾಳಿಯಲ್ಲಿ ನಾನೊಂದು ಹಾಡು, ಎಲ್ಲಿ ಚೆದುರಿದವೋ ಪದ, ತಿಳಿಯೆನು ಜಾಡು! ಹಾಡನ್ನು ಹಿಂಬಾಲಿಸಿ ಹೋಗುವ ಸಾಮರ್ಥ್ಯ ಪಡೆದಿಲ್ಲ ಯಾವುದೇ ಸಾಧಾರಣ ಮರ್ತ್ಯ. ಬಹುದಿನಗಳ ತರುವಾಯ ತೇಗದ ತರುವೊಂದರಲ್ಲಿ ಸಿಕ್ಕಿತು, ನಾನಂದು ಹೂಡಿದ ಬಾಣ, ಕಂಡು ಮುಗುಳ್ನಕ್ಕಿತು, ಸಿಕ್ಕಿತು ಮುಂದೊಂದು ದಿನ ಗೆಳೆಯನೊಬ್ಬನ ಎದೆಯಲ್ಲಿ ಹಿಂದೊಂದು ದಿನ ನಾ ಗುನುಗಿದ ಗೀತೆಯ ಹೂಬಳ್ಳಿ.

ನಂತರವೂ

ಇಮೇಜ್
ಮೂಲ: ಪಿ. ಬಿ. ಶೆಲ್ಲಿ ಅನುವಾದ: ಸಿ. ಪಿ. ರವಿಕುಮಾರ್   ಹಾಡುವ ಗಾಯಕರು ನಿಲ್ಲಿಸಿದರೂ ಸಮೂಹಗಾನ ಕಿವಿಯಲ್ಲಿ ಹಾಡಿನದೇ ಅನುರಣನ ಘಮಘಮ ಪರಿಮಳ ಸೂಸುತ್ತಿದ್ದ  ಮಲ್ಲಿಗೆ ಬಾಡಿದ ಮೇಲೂ ಸೌರಭಸಾಧನ ಶವವಸ್ತ್ರದ ಮೇಲೆ ಹರಡುವರು  ಗುಲಾಬಿಯು ಸತ್ತರೂ ಪಕಳೆಗಳನ್ನ ಹಾಗೇ ನೀನು ತೆರಳಿದ ನಂತರವೂ ಪ್ರೇಮವು ಸಿಹಿನಿದ್ದೆಯಲ್ಲಿ ಕಾಣುವುದು ಸ್ವಪ್ನ .

ವಸಂತಾಗಮನದಲ್ಲಿ ಬರೆದ ಸಾಲುಗಳು

ಇಮೇಜ್
ಮೂಲ: ವಿಲಿಯಂ ವರ್ಡ್ಸ್ ವರ್ತ್ ಕನ್ನಡ ಅನುವಾದ: ಸಿ. ಪಿ. ರವಿಕುಮಾರ್ ಉದ್ಯಾನದಲ್ಲಿ ಒರಗಿ ಕುಳಿತಿದ್ದಾಗ ಒಂದು ದಿನ ಕೇಳಿದವು ಕಿವಿಗೆ ಸಹಸ್ರಾರು ಇನಿಸ್ವನ ಕೆಲವು ಸಲ ಸಂತೋಷದ ಸಿಹಿಘಳಿಗೆಯಲ್ಲೂ ಒಳನುಗ್ಗುತ್ತವೆ ದುಃಖದಾಯಿ ಆಲೋಚನೆಗಳು ಪ್ರಕೃತಿಯ ಸೃಷ್ಟಿಯನ್ನು ಆಸ್ವಾದಿಸುತ್ತಾ  ದೃಷ್ಟಿ ಹರಿಯಿತು ಒಳಗಿನ ಆತ್ಮದತ್ತ ಮುದುಡಿ ಮರುಗಿತು ನನ್ನ ಮನವು ಮರುಕ್ಷಣ ನೆನೆದು ಮನುಷ್ಯ ಮನುಷ್ಯನಿಗೆ ಮಾಡಿರುವುದನ್ನ ನಲಿಯುತ್ತಿದ್ದವು ಗಿಡದಲ್ಲಿ ಡೇರೆ ಹೂಗಳ ಗುಚ್ಛ ನಡುನಡುವೆ ಬಸವನಪಾದ ಬೆಳೆದಿತ್ತು ಯಥೇಚ್ಛ ಪ್ರತಿಯೊಂದು ಹೂವೂ ತಾನು ಉಸಿರಾಡುವ ಗಾಳಿ ಸಂತೋಷದಿಂದಲೇ ಸೇವಿಸುವುದಿಲ್ಲವೇ ಹೇಳಿ! ಆಡುತ್ತಿದ್ದವು ಅಲ್ಲೇ ಹಕ್ಕಿಗಳು ಹತ್ತಾರು ಏನು ಯೋಚಿಸುತ್ತಿದ್ದವೋ ಬಲ್ಲವರು ಯಾರು ನೋಡಿದರೆ ಕುಪ್ಪಳಿಸುತ್ತಾ ಹಾರಾಡುವುದನ್ನು ಎಲ್ಲೆಡೆ ಸಂತೋಷವೇ ತುಂಬಿದಂತಿತ್ತು ಹಕ್ಕಿಗಳ ಪ್ರತಿ ನಡೆ. ಸೂಸಲು ಸುಳಿಗಾಳಿ ಅತ್ತಿತ್ತ ತೂಗಿ ನಕ್ಕವು ಎಳೆರೆಂಬೆಗಳು ಸಂತಸದಿ ಬೀಗಿ ರೆಂಬೆಗಳ ಮೇಲೆ ಹಸಿರು ಚಿಗುರೆಲೆ, ಹೂವು ತಂಗಾಳಿಯ ಸ್ಪರ್ಶಕ್ಕೆ ಸುಖಿಸಿದವು ತಾವೂ. ಆಗಿದ್ದಲ್ಲಿ ಎಲ್ಲರೂ ಸುಖವಾಗಿರಲಿ ಎಂಬುದೇ  ಪ್ರಕೃತಿಯ ಯೋಜನೆ, ನನ್ನ ಆತ್ಮ ಕೇಳುತ್ತಿದೆ  ಏಕೆಂದು ರೋದಿಸುತ್ತಾ,  ವಹಿಸುತ್ತ ಮೌನ ನೆನೆದು ಮನುಷ್ಯ ಮನುಷ್ಯನಿಗೆ ಮಾಡಿರುವುದನ್ನ.